ಜಸ್ಪಾಲ್ ರಾಣಾ ನಿಧನಕ್ಕೆ ರಾಷ್ಟ್ರಪತಿ ಮುರ್ಮು ಸೇರಿ ಗಣ್ಯರ ಸಂತಾಪ
ನವದೆಹಲಿ, 12 ಜೂನ್ (ಹಿ.ಸ.) : ಆ್ಯಂಕರ್ : ಭಾರತದ ಮಾಜಿ ಅಂತಾರಾಷ್ಟ್ರೀಯ ಗುರಿಕಾರ ಹಾಗೂ ಖ್ಯಾತ ತರಬೇತುದಾರ ಜಸ್ಪಾಲ್ ರಾಣಾ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾಧ್ಯಕ್ಷ ಓಂ ಬಿರ್ಲಾ, ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ,ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್
ಜಸ್ಪಾಲ್ ರಾಣಾ ಸಂಗ್ರಹ ಚಿತ್ರ


ನವದೆಹಲಿ, 12 ಜೂನ್ (ಹಿ.ಸ.) :

ಆ್ಯಂಕರ್ : ಭಾರತದ ಮಾಜಿ ಅಂತಾರಾಷ್ಟ್ರೀಯ ಗುರಿಕಾರ ಹಾಗೂ ಖ್ಯಾತ ತರಬೇತುದಾರ ಜಸ್ಪಾಲ್ ರಾಣಾ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾಧ್ಯಕ್ಷ ಓಂ ಬಿರ್ಲಾ, ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ,ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಾಪ ಸೂಚಿಸಿ, “ಜಸ್ಪಾಲ್ ರಾಣಾ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಅವರು ದೇಶದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಖ್ಯಾತ ಗುರಿಕಾರರಾಗಿದ್ದರು. ವಿಶ್ವದ ವಿವಿಧ ಗುರಿಹಾರಾಟ ಸ್ಪರ್ಧೆಗಳಲ್ಲಿ ಅನೇಕ ಪದಕಗಳನ್ನು ಗೆದ್ದು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದರು. ಕ್ರೀಡಾಪಟುವಾಗಿ ಹಾಗೂ ಮಾರ್ಗದರ್ಶಕರಾಗಿ ಯುವ ಪ್ರತಿಭೆಗಳನ್ನು ಬೆಳೆಸುವಲ್ಲಿ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರ ಸಮರ್ಪಣೆ, ಶಿಸ್ತು ಮತ್ತು ಸಾಧನೆಯ ತುಡಿತ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಸದಾ ಪ್ರೇರಣೆಯಾಗಿರಲಿದೆ” ಎಂದು ಹೇಳಿದ್ದಾರೆ.

ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು, ಜಸ್ಪಾಲ್ ರಾಣಾ ಹಲವು ವರ್ಷಗಳ ಕಾಲ ತಮ್ಮ ಅದ್ಭುತ ಗುರಿಹಾರಾಟ ಕೌಶಲ್ಯದ ಮೂಲಕ ವಿಶ್ವ ವೇದಿಕೆಯಲ್ಲಿ ಭಾರತದ ಕೀರ್ತಿಯನ್ನು ಎತ್ತರಕ್ಕೇರಿಸಿದರು ಎಂದು ಸ್ಮರಿಸಿದರು. 2006ರ ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಅವರು ತೋರಿದ ಸಾಧನೆ ಸದಾ ಸ್ಮರಣೀಯವಾಗಿರುತ್ತದೆ. ಅವರ ಅಗಲಿಕೆ ಭಾರತೀಯ ಕ್ರೀಡಾ ಲೋಕಕ್ಕೆ ಭಾರೀ ನಷ್ಟವಾಗಿದೆ ಎಂದು ಹೇಳಿದರು.

ಕೇಂದ್ರ ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು, ಚಾಂಪಿಯನ್ ಕ್ರೀಡಾಪಟು ಹಾಗೂ ಅತ್ಯುತ್ತಮ ತರಬೇತುದಾರರಾಗಿ ಜಸ್ಪಾಲ್ ರಾಣಾ ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಸಾಧನೆ ಮತ್ತು ಮಾರ್ಗದರ್ಶನದಿಂದ ರೂಪುಗೊಂಡಿರುವ ಅನೇಕ ಕ್ರೀಡಾಪಟುಗಳು ಅವರ ಪರಂಪರೆಯನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಜಸ್ಪಾಲ್ ರಾಣಾ ಅತ್ಯುತ್ತಮ ಕ್ರೀಡಾಪಟು ಮತ್ತು ತರಬೇತುದಾರರಾಗಿದ್ದಷ್ಟೇ ಅಲ್ಲದೆ ಅತ್ಯಂತ ಸರಳ, ಸಜ್ಜನ ಹಾಗೂ ಉದಾರ ಮನಸ್ಸಿನ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು. ಭಾರತದಲ್ಲಿ ಗುರಿಹಾರಾಟ ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಭಾರತದ ಅತ್ಯುತ್ತಮ ಶೂಟಿಂಗ್ ಚಾಂಪಿಯನ್ಗಳಲ್ಲಿ ಒಬ್ಬರು ಮತ್ತು ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದ ಮಾರ್ಗದರ್ಶಕ ಜಸ್ಪಾಲ್ ರಾಣಾ ಅವರ ನಿಧನದಿಂದ ತೀವ್ರ ದುಃಖವಾಗಿದೆ.

ಶ್ರೇಷ್ಠತೆಗೆ ಅವರ ಸಮರ್ಪಣೆ ಮತ್ತು ಭಾರತೀಯ ಕ್ರೀಡೆಗೆ ಅವರ ಅಪಾರ ಕೊಡುಗೆ ನಮ್ಮ ರಾಷ್ಟ್ರದ ಮೇಲೆ ಶಾಶ್ವತವಾದ ಗುರುತು ಬಿಟ್ಟಿದೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande