ನಗರದಲ್ಲಿ ಜೂನ್ 15ರಂದು ನೇರ ಸಂದರ್ಶನ
ಗದಗ, 12 ಜೂನ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಹತ್ವದ ಹೆಜ್ಜೆ ಇಟ್ಟಿದ್ದು, ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಜೂನ್ 15ರಂದು ನೇರ ಸಂದರ್ಶನ (ವಾಕ್-ಇನ್ ಇಂಟರ್ವ್ಯೂ) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
ಫೋಟೋ


ಗದಗ, 12 ಜೂನ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಹತ್ವದ ಹೆಜ್ಜೆ ಇಟ್ಟಿದ್ದು, ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಜೂನ್ 15ರಂದು ನೇರ ಸಂದರ್ಶನ (ವಾಕ್-ಇನ್ ಇಂಟರ್ವ್ಯೂ) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂಲಕ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ.ಎನ್. ತಿಳಿಸಿದ್ದಾರೆ.

ನಗರದ ಸ್ಟೇಷನ್ ರಸ್ತೆಯ ಹಳೆಯ ಕಾಮತ್ ಹೋಟೆಲ್ ಎದುರುಗಡೆಯಲ್ಲಿರುವ ಮುಥೂಟ್ ಫಿನ್ಕಾರ್ಪ್ ಲಿಮಿಟೆಡ್ ಕಚೇರಿಯಲ್ಲಿ ಜೂನ್ 15ರಂದು ಬೆಳಿಗ್ಗೆ 10 ಗಂಟೆಯಿಂದ ನೇರ ಸಂದರ್ಶನ ಆರಂಭವಾಗಲಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಮುಥೂಟ್ ಫಿನ್ಕಾರ್ಪ್ ಲಿಮಿಟೆಡ್ ಸಂಸ್ಥೆಯ ಸಂಯುಕ್ತ ಸಹಯೋಗದಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಜಿಲ್ಲೆಯ ಯುವಕರಿಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ದೊರಕಿಸಿಕೊಡುವ ಉದ್ದೇಶ ಹೊಂದಿದೆ.

ಸಂಸ್ಥೆಯಲ್ಲಿ ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ ಹಾಗೂ ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ಅಭ್ಯರ್ಥಿಗಳು ಕನಿಷ್ಠ ಆರು ತಿಂಗಳ ಕೆಲಸದ ಅನುಭವ ಹೊಂದಿರಬೇಕು ಎಂದು ತಿಳಿಸಲಾಗಿದೆ. 18 ರಿಂದ 28 ವರ್ಷದೊಳಗಿನ ಯುವಕರು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಗದಗ, ನರಗುಂದ, ರೋಣ, ಮುಂಡರಗಿ, ಗಜೇಂದ್ರಗಡ, ಹುಲಕೋಟಿ, ಅಣ್ಣಿಗೇರಿ ಹಾಗೂ ಲಕ್ಷ್ಮೇಶ್ವರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಇದರಿಂದ ಜಿಲ್ಲೆಯ ವಿವಿಧ ತಾಲೂಕುಗಳ ನಿರುದ್ಯೋಗಿ ಯುವಕರಿಗೆ ತಮ್ಮದೇ ಪ್ರದೇಶಗಳಲ್ಲಿ ಉದ್ಯೋಗ ದೊರಕುವ ಸಾಧ್ಯತೆ ಹೆಚ್ಚಾಗಿದೆ.

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, ಎರಡು ಪ್ರತಿಗಳ ರೆಸ್ಯೂಮ್ (ಬಯೋಡಾಟಾ), ಆಧಾರ್ ಕಾರ್ಡ್ನ ಝೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ಸಂದರ್ಶನದಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿರಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಶೇಷವಾಗಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಫಲಾನುಭವಿಗಳು ಈ ನೇರ ಸಂದರ್ಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಯುವನಿಧಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪೂರೈಸಿದ ಯುವಕರು ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ಉದ್ಯೋಗಾಕಾಂಕ್ಷಿ ಯುವಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವೃತ್ತಿಜೀವನಕ್ಕೆ ಉತ್ತಮ ಆರಂಭ ನೀಡಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ 8431602181 ಹಾಗೂ 6363330688 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಬಸವಂತ ಪಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande