
ಬೆಂಗಳೂರು, 12 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ಕಸ ಟೆಂಡರ್ ಅಕ್ರಮದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸನಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿಯವರು ತಮ್ಮನ್ನು ಏಜೆಂಟ್ ಎಂದು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಹೌದು, ನಾನು ಏಜೆಂಟ್ ಆಗಿಯೇ ಮಾತನಾಡುತ್ತಿದ್ದೇನೆ. ಆದರೆ ಯಾವುದೋ ಮಾಫಿಯಾದ ಹಿತಾಸಕ್ತಿ ಕಾಯುವ ಕಮಿಷನ್ ಏಜೆಂಟ್ ಆಗಿ ಅಲ್ಲ. ಕರ್ನಾಟಕದ ಏಳೂವರೆ ಕೋಟಿ ಕನ್ನಡಿಗರ ಹಕ್ಕಿಗಾಗಿ ಮತ್ತು ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರ ಧ್ವನಿಯಾಗಿ ನಿಂತಿರುವ ಜನತಾ ಏಜೆಂಟ್ ನಾನು ಎಂದು ಹೇಳಿದ್ದಾರೆ.
ಪ್ರತಿ ಪಕ್ಷ ನಾಯಕನಾಗಿ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸುವುದು ತಮ್ಮ ಸಂವಿಧಾನಬದ್ಧ ಕರ್ತವ್ಯವಾಗಿದ್ದು, ಅದಕ್ಕೆ ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಕಸ ಟೆಂಡರ್ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಸರ್ಕಾರವೇ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿತ್ತು. ಸಮಿತಿಗೆ ವರದಿ ಸಲ್ಲಿಸಲು ನೀಡಲಾಗಿದ್ದ ಒಂದು ವಾರದ ಗಡುವು ಮುಕ್ತಾಯಗೊಂಡಿರುವುದನ್ನು ಉಲ್ಲೇಖಿಸಿದ ಅಶೋಕ್, ಸರ್ಕಾರದಲ್ಲಿ ಪಾರದರ್ಶಕತೆ ಉಳಿದಿದ್ದರೆ, ಸಮಿತಿ ವರದಿಯನ್ನು ಅಡಗಿಸಿಡದೆ ತಕ್ಷಣ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ವರದಿಯನ್ನು ಇಡೀ ರಾಜ್ಯದ ಜನರ ಮುಂದಿಟ್ಟು ಸತ್ಯಾಂಶವನ್ನು ಬಹಿರಂಗಪಡಿಸಿ. ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲವೆಂದರೆ ಸರ್ಕಾರ ಅದನ್ನು ಸಾಬೀತುಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.