
ಬೆಂಗಳೂರು, 12 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿಗೆ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಕಳೆದ ಮೂರು ವರ್ಷಗಳಿಂದ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಗಳು ಡಿ.ಕೆ. ಶಿವಕುಮಾರ್ ಅವರ ವಶದಲ್ಲಿದ್ದರೂ ರಾಜಧಾನಿಯ ಕುಡಿಯುವ ನೀರಿನ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕೇವಲ ಶೇ.33ರಷ್ಟು ನೀರು ಮಾತ್ರ ಉಳಿದಿದ್ದು, ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಹಿನ್ನೆಲೆಯಲ್ಲಿ ಪರಿಸ್ಥಿತಿ ಆತಂಕಕಾರಿ ಹಂತ ತಲುಪಿದೆ ಎಂದು ಅಶೋಕ್ ಹೇಳಿದ್ದಾರೆ. ವಿಶೇಷವಾಗಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 81 ಅಡಿಗೆ ಇಳಿದಿದ್ದು, ಬಳಕೆಗೆ ಲಭ್ಯವಿರುವ ನೀರು ಕೇವಲ 6 ಟಿಎಂಸಿ ಮಾತ್ರ ಉಳಿದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ 77 ಟಿಎಂಸಿ ನೀರಿದ್ದರೆ, ಈ ಬಾರಿ ಒಟ್ಟು 33 ಟಿಎಂಸಿ ನೀರು ಮಾತ್ರ ಇರುವುದಾಗಿ ಅವರು ತಿಳಿಸಿದ್ದಾರೆ. ಲಿಂಗನಮಕ್ಕಿ, ಸೂಪಾ ಹಾಗೂ ವರಾಹಿ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ಕುಸಿಯುತ್ತಿರುವುದರಿಂದ ರಾಜ್ಯಾದ್ಯಂತ ಬರದ ಭೀತಿ ಎದುರಾಗಿದೆ ಎಂದು ಎಚ್ಚರಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಈಗಾಗಲೇ ಕುಡಿಯುವ ನೀರಿಗಾಗಿ ಜನರು ಖಾಸಗಿ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿದ್ದು, “ಟ್ಯಾಂಕರ್ ಮಾಫಿಯಾ” ಪ್ರಭಾವ ಹೆಚ್ಚಾಗಿದೆ ಎಂದು ಆರೋಪಿಸಿರುವ ಅಶೋಕ್, ಇಂತಹ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಜನರಿಗೆ ಕುಡಿಯಲು ಸಾಕಷ್ಟು ನೀರಿಲ್ಲದ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುಗಡೆ ಮಾಡಲು ಮುಂದಾಗಿರುವುದು ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಮೊದಲು ಬೆಂಗಳೂರಿನ ಜನರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಸುರಂಗ ರಸ್ತೆ ಸೇರಿದಂತೆ ವಿವಿಧ ಯೋಜನೆಗಳಿಗಿಂತ ರಾಜಧಾನಿಯ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿರುವ ಅಶೋಕ್, ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಬೆಂಗಳೂರಿಗೆ ನೀರು ಉಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಲ್ಲದಿದ್ದರೆ ಭಾರತೀಯ ಜನತಾ ಪಕ್ಷವು ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.