
ಬಳ್ಳಾರಿ, 12 ಜೂನ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರಲ್ಲಿ ಕಾಡುವ ಅಂಧತ್ವ ಮತ್ತು ದೃಷ್ಟಿ ದೌರ್ಬಲ್ಯವನ್ನು ತಡೆಗಟ್ಟುವುದು, ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಜನರ ದೃಷ್ಟಿ ಆರೋಗ್ಯವನ್ನು ಸುಧಾರಿಸುವುದು ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಂಧತ್ವದ ಪ್ರಮಾಣವನ್ನು ನಿರಂತರವಾಗಿ ಕಡಿಮೆ ಮಾಡುವುದು. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೂ ಗುಣಮಟ್ಟದ ನೇತ್ರ ಚಿಕಿತ್ಸೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ದೃಷ್ಟಿ ದೌರ್ಬಲ್ಯ ಹೊಂದಿರುವವರಿಗೆ ಅಗತ್ಯ ಪುನರ್ವಸತಿ ಸೇವೆಗಳನ್ನು ಒದಗಿಸುವುದು ಹಾಗೂ ಉಚಿತ ನೇತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕಗಳನ್ನು ವಿತರಿಸುವುದು.
ಶಾಲಾ ಮಕ್ಕಳಲ್ಲಿ ದೃಷ್ಟಿ ತಪಾಸಣೆ ನಡೆಸಿ, ಬಾಲ್ಯ ಅಂಧತ್ವವನ್ನು ತಡೆಗಟ್ಟುವುದು ಮತ್ತು ಕಣ್ಣಿನ ದೋಷವಿರುವ ಮಕ್ಕಳಿಗೆ ಉಚಿತ ಕನ್ನಡಕ ನೀಡುವುದು. ಕಣ್ಣಿನ ಆರೋಗ್ಯ ಹಾಗೂ ಕಾರ್ನಿಯಾ ದಾನ (ನೇತ್ರದಾನ) ಮತ್ತು ಕಣ್ಣಿನ ಬ್ಯಾಂಕುಗಳ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಡಿ ಸಿಗುವ ಪ್ರಮುಖ ಸೌಲಭ್ಯಗಳು:
ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ: ಆಧುನಿಕ ತಂತ್ರಜ್ಞಾನ ಬಳಸಿ ಉಚಿತವಾಗಿ ಅಥವಾ ಧನಸಹಾಯದೊಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು.
ಆರ್.ಬಿ.ಎಸ್.ಕೆ. ತಂಡದಿಂದ ತಪಾಸಣೆ: ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳ ಕಣ್ಣಿನ ತಪಾಸಣೆ ನಡೆಸಿ, ದೋಷವಿರುವ ಮಕ್ಕಳಿಗೆ ಹಾಗೂ ಕಣ್ಣಿನ ಸಮಸ್ಯೆ ಗುರುತಿಸಲು ತರಬೇತಿ ಪಡೆದ ಶಿಕ್ಷಕರಿಗೆ ಉಚಿತ ಕನ್ನಡಕ ವಿತರಿಸಲಾಗುವುದು.
ಗ್ಲುಕೋಮಾ ಪತ್ತೆ ಮತ್ತು ಚಿಕಿತ್ಸೆ: ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಮಧುಮೇಹ ಇರುವವರಲ್ಲಿ ಉಂಟಾಗುವ ದೃಷ್ಟಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಗ್ಲುಕೋಮಾ (ಕಣ್ಣಿನ ಒತ್ತಡ ಹೆಚ್ಚಾಗುವ ಕಾಯಿಲೆ) ನಿಯಂತ್ರಣಕ್ಕೆ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ 9 ಆಶಾಕಿರಣ - ದೃಷ್ಟಿಕೇಂದ್ರಗಳು:
ಬಳ್ಳಾರಿ ಜಿಲ್ಲೆಯ ಒಟ್ಟು 9 ಆಶಾಕಿರಣ ದೃಷ್ಟಿಕೇಂದ್ರಗಳಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಉಚಿತ ಕನ್ನಡಕ ಸೇವೆ ಲಭ್ಯವಿದೆ. ಇವುಗಳಲ್ಲಿ 6 ಸಮುದಾಯ ಆರೋಗ್ಯ ಕೇಂದ್ರಗಳು, 2 ಸಾರ್ವಜನಿಕ ಆಸ್ಪತ್ರೆಗಳು ಮತ್ತು 1 ಜಿಲ್ಲಾ ಆಸ್ಪತ್ರೆ ಸೇರಿವೆ ಎಂದು ಅಂಧತ್ವ ನಿವಾರಣಾ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಕೆ.ಜೆ ಅವರು ತಿಳಿಸಿದ್ದಾರೆ.
ನೋಂದಣಿಗೆ ಅಗತ್ಯವಿರುವ ದಾಖಲೆಗಳು:
ಸಾರ್ವಜನಿಕರು ಉಚಿತ ಸೇವೆಗಳನ್ನು ಪಡೆಯಲು ಸ್ಪೇಕ್ಟಿಯಲ್ ಆಪ್ (Spectial App) ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ತಪಾಸಣೆಗೆ ಬರುವಾಗ ಆಧಾರ್ ಕಾರ್ಡ್ ಹಾಗೂ ಅದಕ್ಕೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ತರಬೇಕೆಂದು ಮಾಹಿತಿ ನೀಡಿದ್ದಾರೆ.
ತಾಲ್ಲೂಕುವಾರು ಉಚಿತ ತಪಾಸಣಾ ಕೇಂದ್ರಗಳ ವಿವರ:
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರತಿ ತಿಂಗಳು ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಕೆಳಗಿನ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಸಂಡೂರು-ಕರ್ನಾಟಕ ಸೇವಾ ಸಂಘ (9480225862).
ಸಿರುಗುಪ್ಪ-ಶಂಕರ್ ಕಣ್ಣಿನ ಆಸ್ಪತ್ರೆ (9611115612).
ಕುರುಗೋಡು-ಚಿರಂತನ ಟ್ರಸ್ಟ್ (9591633275).
ಬಳ್ಳಾರಿ-ರುದ್ರಮ್ಮ ತಾಳಿಕೇರಪ್ಪ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ (7411877742).
ವಾರದ ನಿಯಮಿತ ಚಿಕಿತ್ಸೆಗಳು:
ಜಿಲ್ಲಾ ಆಸ್ಪತ್ರೆ ಬಳ್ಳಾರಿ, ಸಂಡೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ಸಿರುಗುಪ್ಪದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವಾರದಲ್ಲಿ ಎರಡು ಬಾರಿ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತದೆ. ಇದರೊಂದಿಗೆ, ಬಳ್ಳಾರಿಯ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಸಂಚಾರಿ ಘಟಕದ ಮೂಲಕವೂ ಕಣ್ಣಿನ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತದೆ.
ಜಿಲ್ಲೆಯ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಈ ಉಚಿತ ನೇತ್ರ ಚಿಕಿತ್ಸಾ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್