
ವಿಜಯಪುರ, 12 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗ ಹಾಗೂ ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಅಂಡ್ ರಿಸರ್ಚ್ ಸೆಂಟರ್ನ ಫಾರ್ಮ್-ಡಿ ವಿಭಾಗದ ಸಹಯೋಗದಲ್ಲಿ ಪ್ರಕಟಿಸಲಾದ “ಅಡ್ವಾನ್ಸ್ ಕೇರ್ ಪ್ಲ್ಯಾನಿಂಗ್ ಫಾರ್ ಅಲಝೈಮರ್ಸ್ ಡಿಸೀಸ್ ಆ್ಯಂಡ್ ಡೆಮೆನ್ಶಿಯಾ” (Advance Care Planning for Alzheimer's Disease and Dementia) ಕೃತಿಯನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ಬಿಡುಗಡೆ ಮಾಡಿದರು.
ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಡಾ. ವೈ. ಎಂ. ಜಯರಾಜ, ಅಲಝೈಮರ್ಸ್ ಕಾಯಿಲೆ ಹಾಗೂ ಡಿಮೆನ್ಶಿಯಾ ಪೀಡಿತರ ಆರೈಕೆಯಲ್ಲಿ ತೊಡಗಿರುವ ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ರೋಗಿಗಳ ಆರೈಕೆದಾರರಿಗೆ ಈ ಪುಸ್ತಕ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ಡಿಮೆನ್ಶಿಯಾ ಆರೈಕೆಗೆ ಸಂಬಂಧಿಸಿದ ಮೂಲಭೂತ ಮಾಹಿತಿಯಿಂದ ಹಿಡಿದು ಆಧುನಿಕ ತಂತ್ರಜ್ಞಾನ, ಚಿಕಿತ್ಸಾ ವಿಧಾನಗಳು ಹಾಗೂ ಆರೈಕೆಯ ವಿವಿಧ ಅಂಶಗಳ ಕುರಿತು ಸಮಗ್ರ ಮಾಹಿತಿ ಈ ಕೃತಿಯಲ್ಲಿ ಒಳಗೊಂಡಿದೆ. ರೋಗಿಗಳ ಗುಣಮಟ್ಟದ ಜೀವನ ಸುಧಾರಣೆಗೆ ಈ ಪುಸ್ತಕ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೃತಿಯ ಲೇಖಕ ಹಾಗೂ ಜೆರಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಆನಂದ ಪಿ. ಅಂಬಲಿ, ಫಾರ್ಮ್-ಡಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಸಿದ್ದಾರೂಢ ಎಂ. ಬಿರಾದಾರ ಹಾಗೂ ಕ್ಲಿನಿಕಲ್ ರಿಸರ್ಚ್ ಫೆಲೋ ಡಾ. ಬಸವರಾಜ ವಿ. ಅವರ ಕಾರ್ಯವನ್ನು ಡಾ. ಜಯರಾಜ ಶ್ಲಾಘಿಸಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ಈ ಪುಸ್ತಕವು ವಿಜಯಪುರ ಜಿಲ್ಲೆಗೆ ಮಾತ್ರ ಸೀಮಿತವಾಗದೆ ದೇಶ-ವಿದೇಶಗಳಲ್ಲಿರುವ ಅಗತ್ಯವಿರುವ ಜನರಿಗೆ ತಲುಪಬೇಕು ಎಂದು ಹೇಳಿದರು.
ಮಾನವನ ಆಯುಷ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಮೆನ್ಶಿಯಾ, ಕ್ಯಾನ್ಸರ್ ಸೇರಿದಂತೆ ವಯೋಸಹಜ ಕಾಯಿಲೆಗಳ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜೆರಿಯಾಟ್ರಿಕ್ಸ್ ಮತ್ತು ಫಾರ್ಮ್-ಡಿ ವಿಭಾಗಗಳು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂಲಕ ರೋಗಿಗಳು ಹಾಗೂ ಕುಟುಂಬಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ವೈದ್ಯಕೀಯ ನೆರವು ನೀಡಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಸಚಿವ ಡಾ. ಆರ್.ವಿ. ಕುಲಕರ್ಣಿ, ವೈದ್ಯಕೀಯ ವಿಭಾಗದ ಡೀನ್ ಹಾಗೂ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಶೆಟ್ಟಿ, ನಿರ್ದೇಶಕ ಡಾ. ಆರ್.ಬಿ. ಕೊಟ್ನಾಳ, ಉಪಪ್ರಾಚಾರ್ಯ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪಗೋಳ, ವೈದ್ಯಕೀಯ ಅಧೀಕ್ಷಕ ಡಾ. ಎಸ್.ಎನ್. ಬೆಂಟೂರ, ಐಕ್ಯೂಎಸಿ ನಿರ್ದೇಶಕಿ ಡಾ. ಸುಮಂಗಲಾ ಪಾಟೀಲ, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ರವಿ ಬಿರಾದಾರ, ಉಪಕುಲಸಚಿವ ಸತೀಶ ಪಾಟೀಲ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande