
ವಿಜಯಪುರ, 12 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ನಗರದ
ದೇಶ ರಕ್ಷಕರ ಪಡೆ ಸಂಚಾಲಿತ ಅನ್ನ ಸ್ನೇಹಿ ಸೇವಾ ಬಳಗ ವತಿಯಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಹಸಿವು ಮುಕ್ತ ಸೇವಾ ಕಾರ್ಯಕ್ರಮದ 100ನೇ ವಾರವನ್ನು ಸಮಾಜಮುಖಿ ಕಾರ್ಯಗಳೊಂದಿಗೆ ಯಶಸ್ವಿಯಾಗಿ ಆಚರಿಸಲಾಯಿತು.
ಈ ವಿಶೇಷ ಸಂದರ್ಭದಲ್ಲಿ ನಗರದ ವಿವಿಧ ಭಾಗಗಳಲ್ಲಿ ಸಂಚರಿಸುವ ಪ್ರಯಾಣಿಕರು, ನಿರ್ಗತಿಕರು, ಆಶ್ರಯವಿಲ್ಲದವರು ಹಾಗೂ ರಸ್ತೆ ಬದಿಯಲ್ಲಿ ವಾಸಿಸುವ ನೂರಾರು ಜನರಿಗೆ ಉಚಿತವಾಗಿ ಬಿಸಿ ಊಟ ವಿತರಿಸಲಾಯಿತು.
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಪ್ರಮುಖ ವೃತ್ತಗಳ ಬಳಿ ಸ್ವಯಂಸೇವಕರು ಖುದ್ದಾಗಿ ತೆರಳಿ ಗೌರವಪೂರ್ವಕವಾಗಿ ಸಿದ್ಧಪಡಿಸಿದ ಆಹಾರವನ್ನು ಅಗತ್ಯವಿರುವವರಿಗೆ ತಲುಪಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಖ್ಯಾತ ಮಧುಮೇಹ ತಜ್ಞ ಡಾ. ಬಾಬು ರಾಜೇಂದ್ರ ನಾಯಿಕ, ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ್ ಹಾಗೂ ಬಂದೇನವಾಜ್ ಬೀಳಗಿ ವಿಶೇಷ ಅತಿಥಿಗಳಾಗಿ ಭಾಗವಹಿಸಿ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅನ್ನ ಸ್ನೇಹಿ ಸೇವಾ ಬಳಗದ ಸಂಸ್ಥಾಪಕ ರೋಹನ್ ಆಪ್ಟೆ, “ಮಾನವ ಸೇವೆಯೇ ಮಾಧವ ಸೇವೆ ಎಂಬ ಧ್ಯೇಯದೊಂದಿಗೆ ಈ ಸೇವಾ ಕಾರ್ಯವನ್ನು ಆರಂಭಿಸಲಾಗಿದ್ದು, ಹಸಿದವರ ಹೊಟ್ಟೆ ತುಂಬಿಸುವುದು ಅತ್ಯಂತ ಶ್ರೇಷ್ಠ ಸೇವೆಯಾಗಿದೆ. ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ” ಎಂದು ಹೇಳಿದರು.
ಸಂಘಟನೆಯ ಅಧ್ಯಕ್ಷ ಆಕಾಶ ಇಂಡಿ ಮಾತನಾಡಿ, “ಹಸಿದವರಿಗೆ ಅನ್ನ ನೀಡುವುದಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ಅನ್ನದಾನ ಸೇವೆಯನ್ನು ಶಾಶ್ವತವಾಗಿ ಮುಂದುವರಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಮುಂದಿನ ದಿನಗಳಲ್ಲೂ ಸಮಾಜಮುಖಿ ಕಾರ್ಯಗಳು ನಿರಂತರವಾಗಿರಲಿವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇಶ ರಕ್ಷಕರ ಪಡೆಯ ವಿಕ್ರಮ್ ತಂಬೇಕರ, ಜಗದೀಶ್ ರುಗಿಮಠ, ಕಿರಣ್ ಕೂಳುರಗಿ, ಶಶಿ, ಸುಜಿತ್, ಕೃಷ್ಣ, ಶಶಿಧರ, ಮುತ್ತು, ಮೈಬುಬ, ಮುಸ್ತಾಕ್, ಶಾಂತು, ಸಂತೋಷ, ಮಹಾಂತೇಶ್, ಪ್ರಕಾಶ, ವಿನಾಯಕ, ಸಾಗರ, ವಿರೇಶ್, ವಿನೋದ್ ಪತ್ತಾರ ಸೇರಿದಂತೆ ಅನ್ನ ಸ್ನೇಹಿ ಸೇವಾ ಬಳಗದ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande