
ವಿಜಯಪುರ, 11 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಗಂಗಾಧರ ಮುತ್ತಗಿ ಅವರು ಕೆ-ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಹೆಮ್ಮೆಯಾಗಿ ಹೊರಹೊಮ್ಮಿದ್ದಾರೆ ಎಂದು ಸಚಿವ ಎಂ ಬಿ ಪಾಟೀಲ್ ಅವರು ಪ್ರಕಟಣೆ ಮೂಲಕ ಅಭಿನಂದಿಸಿದ್ದಾರೆ.
ಒಂದು ಎಕರೆ ಜಮೀನು ಹೊಂದಿರುವ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಗಂಗಾಧರ ಅವರು, ಹಲವು ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳ ನಡುವೆಯೂ ತಮ್ಮ ಪರಿಶ್ರಮ, ಆತ್ಮವಿಶ್ವಾಸ ಮತ್ತು ಛಲದಿಂದ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ.
ಕೆ-ಸಿಇಟಿ ಫಲಿತಾಂಶದಲ್ಲಿ ವೆಟರ್ನರಿ ವಿಭಾಗದಲ್ಲಿ ಸ್ಪಾಟ್ 0.5 ರ್ಯಾಂಕ್ ಹಾಗೂ ಕೃಷಿ ವಿಭಾಗದಲ್ಲಿ ಸ್ಪಾಟ್ 3.5 ರ್ಯಾಂಕ್ ಗಳಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾರೆ. ತಾಂತ್ರಿಕ ಕಾರಣಗಳಿಂದ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾದರೂ, ಯಾವುದೇ ಆತಂಕಕ್ಕೆ ಒಳಗಾಗದೆ ತಮ್ಮ ಗುರಿಯತ್ತ ದೃಢವಾಗಿ ಸಾಗಿದ ಗಂಗಾಧರ ಅವರ ಸಾಧನೆ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಿದೆ.
ಗಂಗಾಧರ ಅವರ ತಂದೆ ಗಾರೆ ಕೆಲಸ ಮಾಡಿ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದು, ರೈತನ ಬದುಕಿನ ಸಂಕಷ್ಟಗಳ ನಡುವೆಯೂ ಮಗನ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡಿದ್ದಾರೆ. ಕುಟುಂಬದ ಕಠಿಣ ಪರಿಸ್ಥಿತಿಗಳನ್ನು ಮೀರಿ ಉನ್ನತ ಸಾಧನೆ ಮಾಡಿರುವ ಗಂಗಾಧರ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
“ಪರಿಶ್ರಮ, ಆತ್ಮವಿಶ್ವಾಸ ಮತ್ತು ಗುರಿಯ ಮೇಲಿನ ನಂಬಿಕೆ ಇದ್ದರೆ ಯಾವುದೇ ಹಿನ್ನೆಲೆಯ ವಿದ್ಯಾರ್ಥಿಯೂ ಸಾಧನೆಯ ಶಿಖರ ತಲುಪಬಹುದು” ಎಂಬುದನ್ನು ಗಂಗಾಧರ ಮುತ್ತಗಿ ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ.
ವಿಜಯಪುರ ಜಿಲ್ಲೆ ಹಾಗೂ ರೈತ ಸಮುದಾಯಕ್ಕೆ ಹೆಮ್ಮೆ ತಂದಿರುವ ಈ ಯುವ ಪ್ರತಿಭೆಗೆ ಸಾರ್ವಜನಿಕರು, ಶಿಕ್ಷಣ ಕ್ಷೇತ್ರದ ಗಣ್ಯರು ಹಾಗೂ ಗ್ರಾಮಸ್ಥರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಗಂಗಾಧರ ಅವರ ಮುಂದಿನ ಶೈಕ್ಷಣಿಕ ಜೀವನ ಯಶಸ್ಸು, ಕೀರ್ತಿ ಮತ್ತು ಮತ್ತಷ್ಟು ಸಾಧನೆಗಳಿಂದ ಕೂಡಿರಲಿ ಎಂದು ಎಲ್ಲರೂ ಹಾರೈಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande