
ಗದಗ, 11 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣೆಯಲ್ಲಿ ವಿನಾಕಾರಣ ವಿಳಂಬವಾಗಬಾರದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ರೂಮ್ ನಂ. 122 ರಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ಜರುಗಿದ ಗೃಹಲಕ್ಷ್ಮೀ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಹಾಗೂ ಆರ್ಥಿಕ ಸಬಲೀಕರಣಗೊಳಿಸಲು ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು ಈ ಸೌಲಭ್ಯದಿಂದ ಯಾವ ಅರ್ಹ ಫಲಾನುಭವಿಯೂ ವಂಚಿತರಾಗದಂತೆ ನೋಡಿಕೊಳ್ಳಬೇಕು.
ಗದಗ ಜಿಲ್ಲೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲು ಇಲಾಖೆಯ ಅಧಿಕಾರಿಗಳು ವಿಶೇಷ ಆಸಕ್ತಿ ಕಾರ್ಯನಿರ್ವಹಿಸಬೇಕು. ಗೃಹಲಕ್ಷ್ಮೀ ಯೋಜನೆಯ ಹಣ ದುರುಪಯೋಗವಾಗದಂತೆ ಕ್ರಮ ವಹಿಸಬೇಕು. ಮರಣ ಹೊಂದಿದವರ ಖಾತೆಗ ಗೃಹಲಕ್ಷ್ಮೀ ಹಣ ಜಮಾ ಆಗುತ್ತಿದ್ದರೆ ಅಂತಹ ಪ್ರಕರಣಗಳಾಗದಂತೆ ತಡೆಯಲು ಕ್ರಮ ವಹಿಸಬೇಕು. ಒಂದು ವೇಳೆ ಮರಣ ಹೊಂದಿದವರ ಖಾತೆಗೆ ಗೃಹಲಕ್ಷ್ಮೀ ಹಣ ಜಮೆಯಾಗಿದ್ದರೆ ಅಂತಹ ಹಣವನ್ನು ಸರ್ಕಾರಕ್ಕೆ ಮರುಪಾವತಿಗೆ ಕ್ರಮ ವಹಿಸಬೇಕು.
ಅಂಗನವಾಡಿ ಕಾರ್ಯಕರ್ತೆಯರು ಆಯಾ ವ್ಯಾಪ್ತಿಯಲ್ಲಿನ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ವಿವರ ಹಾಗೂ ಮರಣ ಹೊಂದಿದವರ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿರ್ದೇಶನ ನೀಡಬೇಕು. ಈ ವರದಿಯನ್ನು ಎಲ್ಲ ಬ್ಯಾಂಕುಗಳಿಗೆ ಸಲ್ಲಿಸಬೇಕು. ಒಟ್ಟಾರೆಯಾಗಿ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪೂರ್ಣಪ್ರಮಾಣದಲ್ಲಿ ಸದ್ಭಳಕೆಯಾಗಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯರಾದ ಅಶೋಕ ಮಂದಾಲಿ ಮಾತನಾಡಿ ಯೋಜನೆಯಗೆ ಸಂಬಂಧಿಸಿದಂತೆ ಆಧಾರ್ ಸೀಡಿಂಗ್ ಸಮಸ್ಯೆ ಹಾಗೂ ತಾಂತ್ರಿಕ ತೊಂದರೆಗಳೇನಾದರೂ ಇದ್ದಲ್ಲಿ ಪರಿಶೀಲನೆ ನಡೆಸಬೇಕು. ಯೋಜನೆಯ ಸೌಲಭ್ಯದ ಫಲಾನುಭವಿಗಳ ಮನೆ ಮನೆ ಸರ್ವೆ ಕಾರ್ಯ ಮಾಡುವಲ್ಲಿ ವಿಳಂಬ ಮಾಡಬಾರದು. ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಅನುದಾನದ ಕೊರತೆಯಿದ್ದರೆ ಸರ್ಕಾರಕ್ಕೆ ತ್ವರಿತವಾಗಿ ಅನುದಾನ ಬಿಡುಗಡೆಗಾಗಿ ಪತ್ರ ಬರೆಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ರಾಧಾ ಮಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಿದೆ. ಸೌಲಭ್ಯ ವಿತರಣೆಯಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದರಿಂದ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಯೋಜನೆಯಡಿ ಗದಗ ಜಿಲ್ಲೆಯಲ್ಲಿ ಫೆಬ್ರುವರಿ 2026 ಮಾಹೆಯಲ್ಲಿ 261860 ಅರ್ಜಿಗಳು ಸ್ವೀಕೃತಗೊಂಡ /ನೊಂದಣಿಯಾಗಿದ್ದು ಅದರಲ್ಲಿ 252843 ಅರ್ಜಿಗಳು ಮಂಜೂರಾಗಿವೆ. ಶೇ.96.56 ರಷ್ಟು ಪ್ರಗತಿ ಸಾಧಿಸಲಾಗಿದೆ. ತಾಲೂಕಾವಾರು ಸಾಧನೆ ಇಂತಿದೆ: ಗದಗ- 96.50 %, ಗಜೇಂದ್ರಗಡ- 96.14 %, ಲಕ್ಷ್ಮೇಶ್ವರ 96.83 %, ಮುಂಡರಗಿ- 96.52 % , ನರಗುಂದ – 96.62 % , ರೋಣ- 96.53 % ಹಾಗೂ ಶಿರಹಟ್ಟಿ- 96.97 % ರಷ್ಟು ಸಾಧನೆಯಾಗಿದೆ ಎಂದು ಸಂಬAಧಿತ ಅಧಿಕಾರಿಗಳು ಸಭೆಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ವಿತರಣೆ ಸಂಬಂಧಿಸಿದಂತೆ ಉಂಟಾಗುತ್ತಿರುವ ಇ ಕೈವೈಸಿ, ಎನ್ಪಿಸಿಐ , ಜಿಎಸ್ಟಿ ಮುಂತಾದ ತಾಂತ್ರಿಕ ಸಮಸ್ಯೆಗಳ ಕುರಿತು ವಿವರವಾದ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷರುಗಳಾದ ಫಕ್ರುಸಾಬ ಚಿಕ್ಕಮಣ್ಣೂರ, ಪಿ.ಬಿ.ಅಳಗವಾಡಿ, ಸದಸ್ಯರುಗಳಾದ ವೀರಣ್ಣ ಪಠಪತಿ, ವಿವೇಕ ಯಾವಗಲ್, ಸಂಗನಗೌಡ ಪಾಟೀಲ, ಶರಣಪ್ಪ ಬೆಟಗೇರಿ, ಮಹಿಳಾ ಇಲಾಖೆಯ ನಿರೂಪಣಾಧಿಕಾರಿ ಮಹಾಂತೇಶ ಪೂಜಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಧಿಕಾರಿ ಜಯಶ್ರೀ ಆರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಧೀಕ್ಷಕರಾದ ರಾಜು ಕಂಠಿಗೊಣ್ಣನವರ, ಅಂಗನವಾಡಿ ಮೇಲ್ವಿಚಾರಕರು, ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಶ್ರೀಮತಿ ರೇಣುಕಾ ಪ್ರಾರ್ಥಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP