ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ, ಜೆಸಿಬಿಯಿಂದ ಮನೆ ಕಂಪೌಂಡ್ ಧ್ವಂಸ
ಗದಗ, 11 ಜೂನ್ (ಹಿ.ಸ.) : ಆ್ಯಂಕರ್ : ಗದಗ ನಗರದಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದ್ದು, ಸಾಲದ ಹಣ ಹಾಗೂ ಬಡ್ಡಿ ವಸೂಲಾತಿ ಹೆಸರಿನಲ್ಲಿ ಕುಟುಂಬವೊಂದರ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬಡ್ಡಿ ಹಣ ಪಾವತಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ
ಫೋಟೋ


ಗದಗ, 11 ಜೂನ್ (ಹಿ.ಸ.) :

ಆ್ಯಂಕರ್ : ಗದಗ ನಗರದಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದ್ದು, ಸಾಲದ ಹಣ ಹಾಗೂ ಬಡ್ಡಿ ವಸೂಲಾತಿ ಹೆಸರಿನಲ್ಲಿ ಕುಟುಂಬವೊಂದರ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬಡ್ಡಿ ಹಣ ಪಾವತಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಹಾನಿಗೊಳಿಸಿ, ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಜೆಸಿಬಿ ಯಂತ್ರದ ಮೂಲಕ ಮನೆ ಕಂಪೌಂಡ್ ಗೋಡೆಯನ್ನೇ ನೆಲಸಮಗೊಳಿಸಿರುವ ಘಟನೆ ಗದಗ ನಗರದ ಕಳಸಾಪುರ ರಿಂಗ್ರೋಡ್ನ ಅಭಿನವ ಬಡಾವಣೆಯಲ್ಲಿ ನಡೆದಿದೆ.

ಅಭಿನವ ಬಡಾವಣೆಯ ನಿವಾಸಿ ಕೋಟೇಶ್ ಬಾಗಲಿ ಎಂಬುವರು ಕೆಲವು ವರ್ಷಗಳ ಹಿಂದೆ ಖಾಸಗಿ ವ್ಯಕ್ತಿಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರು. ಆರೋಪಿಗಳಾದ ದರ್ಶನ್, ಶ್ರೀಕಾಂತ ಹಾಗೂ ಜೀವನ ಎಂಬವರು ನೀಡಿದ ಸಾಲಕ್ಕೆ ತಿಂಗಳಿಗೆ ಶೇ.20ರಷ್ಟು ಬಡ್ಡಿ ವಿಧಿಸುತ್ತಿದ್ದರು ಎನ್ನಲಾಗಿದೆ. ಸಾಲದ ಹಣಕ್ಕಾಗಿ ಈಗಾಗಲೇ ಸಾಕಷ್ಟು ಮೊತ್ತ ಪಾವತಿಸಿದ್ದರೂ, ಇನ್ನೂ ಹೆಚ್ಚಿನ ಹಣ ಹಾಗೂ ಬಡ್ಡಿ ನೀಡುವಂತೆ ನಿರಂತರ ಒತ್ತಡ ಹೇರಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ಬಡ್ಡಿ ಪಾವತಿಯಾಗದ ಹಿನ್ನೆಲೆ ಆರೋಪಿಗಳು ಸಾಲದ ಮೊತ್ತದ ಎರಡು ಪಟ್ಟು ಹಣ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು. ಈ ನಡುವೆ ಕೋಟೇಶ್ ಬಾಗಲಿ ಮನೆಯಲ್ಲಿ ಇಲ್ಲದ ಸಮಯವನ್ನು ಗಮನಿಸಿ ಮನೆಗೆ ನುಗ್ಗಿದ ಆರೋಪಿಗಳು ಅವರ ಪತ್ನಿ ಸುಧಾ ಬಾಗಲಿ, ತಂದೆ ನಿಂಗಪ್ಪ ಬಾಗಲಿ ಹಾಗೂ ತಾಯಿ ಹುಲಿಗೆಮ್ಮ ಬಾಗಲಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, ಮನೆಯ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. ನಂತರ ಜೆಸಿಬಿ ಯಂತ್ರ ಬಳಸಿ ಮನೆ ಕಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿ ದಬ್ಬಾಳಿಕೆ ಮೆರೆದಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಘಟನೆಯ ನಂತರ ಇಡೀ ಕುಟುಂಬ ಭಯಭೀತಗೊಂಡಿದ್ದು, ಜೀವಭಯದಿಂದ ಊರು ಬಿಟ್ಟು ತೆರಳುವ ಪರಿಸ್ಥಿತಿ ಎದುರಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೋಟೇಶ್ ಬಾಗಲಿ ಗೋವಾ ಕ್ಯಾಸಿನೋ ಚಟಕ್ಕೆ ಒಳಗಾಗಿದ್ದು, ಈ ಕಾರಣದಿಂದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಸಾಲದ ಹೊರೆ ಹೆಚ್ಚಾಗುತ್ತಿದ್ದಂತೆ ಕುಟುಂಬದ ಹೆಸರಿನಲ್ಲಿದ್ದ ನಾಲ್ಕು ಎಕರೆ ಜಮೀನನ್ನೂ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಆದರೂ ಬಡ್ಡಿ ದಂಧೆಕೋರರ ಕಿರುಕುಳ ನಿಲ್ಲದೇ, ಮತ್ತಷ್ಟು ಹಣ ನೀಡುವಂತೆ ಒತ್ತಡ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಕೋಟೇಶ್ ಬಾಗಲಿ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಗೆ ಬಳಸಲಾಗಿದೆ ಎನ್ನಲಾದ ಜೆಸಿಬಿ ಯಂತ್ರ ಹಾಗೂ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಕ್ರಮ ಬಡ್ಡಿ ದಂಧೆ, ಜೀವ ಬೆದರಿಕೆ ಹಾಗೂ ಆಸ್ತಿ ಹಾನಿಗೆ ಸಂಬಂಧಿಸಿದಂತೆ ದರ್ಶನ್, ಶ್ರೀಕಾಂತ ಮತ್ತು ಜೀವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಅಕ್ರಮ ಬಡ್ಡಿ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಗತ್ಯವಿದ್ದರೆ ಗಡಿಪಾರು ಕ್ರಮಕ್ಕೂ ಮುಂದಾಗಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮೀಟರ್ ಬಡ್ಡಿ ದಂಧೆ, ಖಾಲಿ ಚೆಕ್ಗಳಿಗೆ ಸಹಿ ಮಾಡಿಸಿಕೊಳ್ಳುವುದು, ಜೀವ ಬೆದರಿಕೆ ಹಾಕುವುದು ಹಾಗೂ ಆಸ್ತಿ ಹಾನಿ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಾನೂನಿನ ಭಯವಿಲ್ಲದೆ ದಬ್ಬಾಳಿಕೆ ನಡೆಸುತ್ತಿರುವ ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡು ಇಂತಹ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande