
ನವದೆಹಲಿ, 11 ಜೂನ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದಿಂದ ರಾಜ್ಯ ಸಭೆಗೆ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜೂನ್ 12ರಂದು ಕೈಗೆತ್ತಿಕೊಳ್ಳಲಿದೆ.
ಮೀನಾಕ್ಷಿ ನಟರಾಜನ್ ಪರ ವಕೀಲ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಗುರುವಾರ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ರಜಾ ಪೀಠದ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ಪ್ರಕರಣದ ತುರ್ತು ಸ್ವರೂಪವನ್ನು ಉಲ್ಲೇಖಿಸಿದ ಅವರು, ಅರ್ಜಿಯನ್ನು ಇದೇ ದಿನ ಅಥವಾ ಮುಂದಿನ ದಿನ ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಮನವಿ ಸಲ್ಲಿಸಿದರು.
ನಾಮಪತ್ರ ಹಿಂಪಡೆಯಲು ಗುರುವಾರವೇ ಕೊನೆಯ ದಿನವಾಗಿರುವುದರಿಂದ ಪ್ರಕರಣದ ತ್ವರಿತ ವಿಚಾರಣೆ ಅಗತ್ಯವಾಗಿದೆ ಎಂದು ಸಿಂಘ್ವಿ ನ್ಯಾಯಾಲಯದ ಗಮನ ಸೆಳೆದರು. ಜೊತೆಗೆ, ರಾಜ್ಯ ಸಭಾ ಚುನಾವಣೆಯ ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡುವಂತೆ ನ್ಯಾಯಾಲಯ ಆದೇಶಿಸಬೇಕು ಎಂದು ಸಹ ಅವರು ವಿನಂತಿಸಿದರು.
ಅರ್ಜಿಯನ್ನು ಪರಿಗಣಿಸಿದ ರಜಾ ಪೀಠವು ಜೂನ್ 12ರಂದು ಪ್ರಕರಣದ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ.
ಮಧ್ಯ ಪ್ರದೇಶದ ರಾಜ್ಯ ಸಭಾ ಚುನಾವಣೆಯ ನಡುವೆಯೇ ಈ ವಿದ್ಯಮಾನ ಸಂಭವಿಸಿದ್ದು, ಸುಪ್ರೀಂ ಕೋರ್ಟ್ನ ತೀರ್ಪು ಚುನಾವಣಾ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.