
ನವದೆಹಲಿ, 11 ಜೂನ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಜೂನ್ 14ರಂದು ಕೃಷಿ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಲಿರುವ ಕೃಷಿ ವಿಜ್ಞಾನ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಈ ಕೇಂದ್ರವನ್ನು ದೇಶದ ಮಾದರಿ ಕೃಷಿ ವಿಜ್ಞಾನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದು, ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳು, ಆಧುನಿಕ ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಮಾಹಿತಿ ಹಾಗೂ ತರಬೇತಿ ಒದಗಿಸಲಾಗುವುದು.
ಕೇಂದ್ರ ಕೃಷಿ ಸಚಿವ ಹಾಗೂ ವಿದಿಶಾ ಸಂಸದರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಡಿಯೋ ಸಂದೇಶದ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೂನ್ 14ರಂದು ಬೆಳಿಗ್ಗೆ 10 ಗಂಟೆಗೆ ವಿದಿಶಾದ ಬೆರಖೇಡಿ ಜಟ್ಟು ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ವಿದಿಶಾ ಲೋಕಸಭಾ ಕ್ಷೇತ್ರದ ಕೃಷಿ ಮತ್ತು ರೈತರ ಅಭಿವೃದ್ಧಿಯ ದೃಷ್ಟಿಯಿಂದ ಐತಿಹಾಸಿಕ ದಿನವಾಗಲಿದೆ ಎಂದು ಚೌಹಾಣ್ ಹೇಳಿದ್ದಾರೆ. ವಿದಿಶಾ, ರೈಸೇನ್, ಸೀಹೋರ್ ಹಾಗೂ ದೇವಾಸ್ ಜಿಲ್ಲೆಗಳಿಗಾಗಿ ಸಿದ್ಧಪಡಿಸಿರುವ ವೈಜ್ಞಾನಿಕ ಕೃಷಿ ರಸ್ತೆನಕ್ಷೆಯನ್ನು (ಅಗ್ರಿಕಲ್ಚರ್ ರೋಡ್ಮ್ಯಾಪ್) ಅನುಷ್ಠಾನಗೊಳಿಸುವ ಕಾರ್ಯಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಂಗವಾಗಿ ‘ಖೇತ್ ಬಚಾವೋ ಅಭಿಯಾನ’ ಅಡಿಯಲ್ಲಿ ರೈತರಿಗೆ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗುವುದು. ನಕಲಿ ರಸಗೊಬ್ಬರಗಳನ್ನು ಗುರುತಿಸುವ ವಿಧಾನ, ಅವುಗಳಿಂದ ರಕ್ಷಣೆ ಪಡೆಯುವ ಕ್ರಮಗಳು, ಆಧುನಿಕ ಕೃಷಿ ಯಂತ್ರೋಪಕರಣಗಳ ಬಳಕೆ, ಸುಧಾರಿತ ಬಿತ್ತನೆ ವಿಧಾನಗಳು ಹಾಗೂ ನವೀನ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುತ್ತದೆ.
ಇದಲ್ಲದೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾಹಿತಿ ಮಳಿಗೆಗಳು ಹಾಗೂ ತಜ್ಞರಿಂದ ನೇರ ಸಲಹೆ-ಸೂಚನೆಗಳ ವ್ಯವಸ್ಥೆಯೂ ಇರಲಿದೆ. ಕೃಷಿಯನ್ನು ಕಾಲಾನುಸಾರವಾಗಿ ಆಧುನೀಕರಿಸಲು ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ರೈತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪರಿಣಿತರ ಮಾರ್ಗದರ್ಶನ ಪಡೆಯಬೇಕು ಎಂದು ಶಿವರಾಜ್ ಸಿಂಗ್ ಚೌಹಾಣ್ ಮನವಿ ಮಾಡಿದ್ದಾರೆ.
ಈ ಕೃಷಿ ವಿಜ್ಞಾನ ಕೇಂದ್ರ ಕಾರ್ಯಾರಂಭಗೊಂಡ ಬಳಿಕ ಪ್ರದೇಶದ ರೈತರಿಗೆ ಸಂಶೋಧನಾ ಆಧಾರಿತ ಕೃಷಿ ಮಾಹಿತಿ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ತಾಂತ್ರಿಕ ತರಬೇತಿ ಮತ್ತು ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.