
ಕೊಪ್ಪಳ, 11 ಜೂನ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ನಳಗಳ ಸಂಪರ್ಕವನ್ನು ನಿಯಮಾನುಸಾರ ದಂಡವನ್ನು ವಿಧಿಸಿ ಅನಧೀಕೃತ ನಳಗಳನ್ನು ಸಕ್ರಮಗೊಳಿಸಲು ಕೊಪ್ಪಳ ನಗರಸಭೆಯಿಂದ ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ಅನಧಿಕೃತ ನಳಗಳನ್ನು ಸಕ್ರಮಗೊಳಿಸಿದಲ್ಲಿ ನಗರಸಭೆಯ ಆದಾಯವನ್ನು ಹೆಚ್ಚಿಸಬಹುದಾಗಿದ್ದು, ಪ್ರತಿಯೊಂದು ಅನಧಿಕೃತ ನಳ ಸಂಪರ್ಕವನ್ನು ಸಕ್ರಮಗೊಳಿಸಲು ಒಂದು ಬಾರಿ ರೂ. 5000 ದಂಡವನ್ನು ವಿಧಿಸಬಹುದಾಗಿರುತ್ತದೆ. ಇದರೊಂದಿಗೆ ಚಾಲ್ತಿ ವರ್ಷದ ನೀರಿನ ಕರ ರೂ. 2160 ಗಳನ್ನು ಪಾವತಿಸಿಕೊಂಡು ಅನಧಿಕೃತ ನಳವನ್ನು ಅಧಿಕೃತಗೊಳಿಸಲು ಕೊಪ್ಪಳ ನಗರಸಭೆಯ ಆಡಳಿತಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿರುತ್ತಾರೆ.
ಆದ್ದರಿಂದ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಅನಧೀಕೃತ ನಳಗಳ ಸಂಪರ್ಕವನ್ನು ಹೊಂದಿದವರು ಈ ಕೂಡಲೇ ಕೊಪ್ಪಳ ನಗರಸಭೆಯ ಕಾರ್ಯಾಲಯಕ್ಕೆ ಸಂಪರ್ಕಿಸಿ ತಮ್ಮ ಮನೆಗೆ ಪಡೆದುಕೊಳ್ಳಲಾಗಿರುವ ಅನಧೀಕೃತ ನಳವನ್ನು ರೂ. 5000 ದಂಡ ಹಾಗೂ ಚಾಲ್ತಿ ವರ್ಷದ ನೀರಿನ ಕರ ರೂ. 2160 ಗಳನ್ನು ಪಾವತಿಸಿ, ಅಂತಹ ನಳವನ್ನು ಸಕ್ರಮಗೊಳಿಸಿಕೊಳ್ಳಬೇಕು.
ತಪ್ಪಿದ್ದಲ್ಲಿ ಮುನ್ಸೂಚನೆ ನೀಡದೇ ಅನಧೀಕೃತವಾಗಿ ಪಡೆದುಕೊಂಡ ನಳ ಸಂಪರ್ಕವನ್ನು ಸ್ಥಗಿತಗೊಳಿಸಿ ತಮ್ಮ ವಿರುದ್ಧ ಕರ್ನಾಟಕ ಮುನ್ಸಿಪಲ್ ಕಾಯ್ದೆಯನುಸಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್