ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಹ್ಲಾದ ಜೋಶಿ ವಾಗ್ದಾಳಿ
ಬೆಂಗಳೂರು, 11 ಜೂನ್ (ಹಿ.ಸ.) : ಆ್ಯಂಕರ್ : ಗೃಹಲಕ್ಷ್ಮಿ ಯೋಜನೆಯಡಿ 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಪತ್ತೆಯಾಗಿರುವುದು ರಾಜ್ಯ ಸರ್ಕಾರದ ಯೋಜನಾ ನಿರ್ವಹಣೆಯ ವೈಫಲ್ಯವನ್ನು ಮತ್ತೊಮ್ಮೆ ಬಯಲಿಗೆಳೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ಸಾಮಾಜಿಕ ಜ
ಜೋಶಿ


ಬೆಂಗಳೂರು, 11 ಜೂನ್ (ಹಿ.ಸ.) :

ಆ್ಯಂಕರ್ : ಗೃಹಲಕ್ಷ್ಮಿ ಯೋಜನೆಯಡಿ 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಅಧಿಕ ಅನರ್ಹ ಫಲಾನುಭವಿಗಳು ಪತ್ತೆಯಾಗಿರುವುದು ರಾಜ್ಯ ಸರ್ಕಾರದ ಯೋಜನಾ ನಿರ್ವಹಣೆಯ ವೈಫಲ್ಯವನ್ನು ಮತ್ತೊಮ್ಮೆ ಬಯಲಿಗೆಳೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಅವರು, ಸರಿಯಾದ ಮಾರ್ಗಸೂಚಿ, ಸಮರ್ಪಕ ಫಲಾನುಭವಿ ಗುರುತಿಸುವಿಕೆ ಹಾಗೂ ಪಾರದರ್ಶಕ ವ್ಯವಸ್ಥೆಯಿಲ್ಲದೆ ಯೋಜನೆಯನ್ನು ಜಾರಿಗೊಳಿಸಿದ ಪರಿಣಾಮ ತೆರಿಗೆದಾರರ ಹಣ ದುರ್ಬಳಕೆಯಾಗುವಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ 55,232 ಮೃತರ ಹೆಸರಿನಲ್ಲಿ ಹಾಗೂ 56,860 ಆದಾಯ ತೆರಿಗೆ ಪಾವತಿದಾರರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಸರ್ಕಾರದ ಆಡಳಿತಾತ್ಮಕ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದು ಕೇವಲ ನಿರ್ಲಕ್ಷ್ಯವಲ್ಲ, ವ್ಯವಸ್ಥಿತ ಲೂಟಿಗೆ ದಾರಿ ಮಾಡಿಕೊಟ್ಟಿರುವ ಆಡಳಿತದ ಉದಾಹರಣೆಯಾಗಿದೆ ಎಂದು ಆರೋಪಿಸಿದ ಜೋಶಿ, ಮತ್ತೊಂದೆಡೆ ಅರ್ಹ ಫಲಾನುಭವಿಗಳಾದ ತಾಯಂದಿರಿಗೆ ಕಳೆದ ವರ್ಷದಿಂದ ಬಾಕಿ ಉಳಿದಿರುವ ಎರಡು ತಿಂಗಳ ಹಣವನ್ನು ಇನ್ನೂ ನೀಡದೆ ಸರ್ಕಾರ ವಂಚಿಸುತ್ತಿದೆ ಎಂದು ಟೀಕಿಸಿದ್ದಾರೆ.

ಕೇವಲ ರಾಜಕೀಯ ಲಾಭಕ್ಕಾಗಿ ಯಾವುದೇ ಕಟ್ಟುನಿಟ್ಟಿನ ಪರಿಶೀಲನೆ ಮತ್ತು ಫಲಾನುಭವಿ ಗುರುತಿಸುವಿಕೆ ಪ್ರಕ್ರಿಯೆ ಇಲ್ಲದೆ ತರಾತುರಿಯಲ್ಲಿ ಯೋಜನೆ ಘೋಷಿಸಿದರೆ ಇಂತಹ ದೊಡ್ಡ ಪ್ರಮಾಣದ ಅಕ್ರಮಗಳು ಮತ್ತು ಅವ್ಯವಸ್ಥೆಗಳು ಉಂಟಾಗುತ್ತವೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಯೋಜನೆಯ ಅನುಷ್ಠಾನದಲ್ಲಿ ಉಂಟಾಗಿರುವ ಲೋಪಗಳಿಗೆ ಉತ್ತರ ನೀಡಬೇಕು ಹಾಗೂ ಅರ್ಹ ಫಲಾನುಭವಿಗಳಿಗೆ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande