
ಬಾಗಲಕೋಟೆ, 11 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ತೋಗುಣಸಿ ರಸ್ತೆಗೆ ಹೊಂದಿಕೊಂಡಿರುವ ಹಾನಾಪೂರ ಎಸ್.ಪಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯ ನಿರ್ವಹಣೆಯ ಬಗ್ಗೆ ಪೋಷಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕಳೆದ ವರ್ಷವೇ ಶಾಸಕರಿಂದ ಉದ್ಘಾಟನೆಗೊಂಡಿದ್ದ ಈ ವಸತಿ ಶಾಲೆ, ಒಂದು ವರ್ಷದೊಳಗೆ ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ನಿರ್ವಹಣಾ ಲೋಪಗಳಿಂದ ಅವ್ಯವಸ್ಥೆಯ ಗೂಡಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಮುರುಡಿ ಗ್ರಾಮದ ಸರ್ವೇ ನಂ.77ರಲ್ಲಿ 9.20 ಎಕರೆ ಪ್ರದೇಶದಲ್ಲಿ ಸುಮಾರು ₹22.40 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ವಸತಿ ಶಾಲೆಯಲ್ಲಿ 250 ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. 125 ವಿದ್ಯಾರ್ಥಿನಿಯರು ಹಾಗೂ 125 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಆವರಣದಲ್ಲಿ ಪ್ರಾಚಾರ್ಯರು ಹಾಗೂ 13 ಸಿಬ್ಬಂದಿಗೆ ಪ್ರತ್ಯೇಕ ವಸತಿ ಗೃಹಗಳನ್ನೂ ನಿರ್ಮಿಸಲಾಗಿದೆ.
ಆದರೆ, ಶಾಲೆಯ ಕಟ್ಟಡ ಮತ್ತು ಮೂಲಸೌಕರ್ಯಗಳು ಉತ್ತಮವಾಗಿದ್ದರೂ, ವಿದ್ಯಾರ್ಥಿಗಳ ವೈಯಕ್ತಿಕ ವಸ್ತುಗಳ ಸುರಕ್ಷತೆ ಹಾಗೂ ವಸತಿ ನಿಲಯದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂದು ಪೋಷಕ ರು ಆರೋಪಿಸಿದ್ದಾರೆ.ಟ್ರಂಕ್ಗಳಲ್ಲಿದ್ದ ಹಣ, ಪುಸ್ತಕ, ಬಟ್ಟೆ ಕಳವು ಆರೋಪ
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಿರುವ ತಗಡಿನ ಟ್ರಂಕ್ಗಳ ಗುಣಮಟ್ಟದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ರಂಕ್ಗಳ ಕೀಲಿಗಳು ಸುಲಭವಾಗಿ ತೆರೆಯುವಂತಿದ್ದು, ಅವುಗಳಲ್ಲಿ ಇಟ್ಟಿದ್ದ ಬಟ್ಟೆ, ಪುಸ್ತಕ, ತಿನಿಸು, ಖರ್ಚಿನ ಹಣ ಸೇರಿದಂತೆ ಹಲವು ವಸ್ತುಗಳು ನಾಪತ್ತೆಯಾಗುತ್ತಿವೆ ಎಂದು ಆರೋಪಿಸಲಾಗಿದೆ. ಶೂ, ಚಪ್ಪಲಿ ಸೇರಿದಂತೆ ವಿದ್ಯಾರ್ಥಿಗಳ ದಿನಬಳಕೆಯ ವಸ್ತುಗಳೂ ಕಳವಾಗುತ್ತಿವೆ. ಈ ಬಗ್ಗೆ ಹಲವು ಬಾರಿ ಪ್ರಾಚಾರ್ಯರ ಗಮನಕ್ಕೆ ತಂದರೂ, “ತಪ್ಪಾಗಿದೆ, ಸರಿಪಡಿಸುತ್ತೇವೆ” ಎಂಬ ಉತ್ತರ ಮಾತ್ರ ಸಿಗುತ್ತಿದೆ ಎಂದು ಪಾಲಕರು ದೂರಿದ್ದಾರೆ.
ಹಿಂದಿನ ವಿದ್ಯಾರ್ಥಿಗಳ ಮೇಲೆ ಅನುಮಾನ
ಕಳ್ಳತನದ ಘಟನೆಗಳ ಕುರಿತು ಪಾಲಕರು ಪ್ರಶ್ನಿಸಿದಾಗ, ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಸಿ ಶಾಲೆಯಿಂದ ತೆರಳಿರುವ ಕೆಲ ವಿದ್ಯಾರ್ಥಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಆದರೆ, ಅಂತಹ ವಿದ್ಯಾರ್ಥಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಮಕ್ಕಳು ಅಂಕಗಳಲ್ಲಿ ಹಿಂದೆ ಬಿದ್ದರೂ ಪರವಾಗಿಲ್ಲ, ಆದರೆ ಉತ್ತಮ ಮೌಲ್ಯ ಮತ್ತು ಸಂಸ್ಕಾರ ಕಲಿಯಬೇಕು. ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ವಸತಿ ಶಾಲೆಯಲ್ಲಿ ಕಳ್ಳತನದಂತಹ ದುಷ್ಪ್ರವೃತ್ತಿಗಳು ಬೆಳೆಯುತ್ತಿರುವುದು ಆತಂಕಕಾರಿ” ಎಂದು ಪಾಲಕರಾದ ಮುರುಡಿ ಗ್ರಾಮದ ಹನಮಂತ ನೀರಲಕೇರಿ, ಲಾಯದಗುಂದಿ ಗ್ರಾಮದ ಬಸವರಾಜ ದೊಡ್ಡಮನಿ, ಹಳದೂರ ಗ್ರಾಮದ ರಮೇಶ ಮಾದರ ಸೇರಿದಂತೆ ಹಲವರು ಹೇಳಿದ್ದಾರೆ.
ಶಾಸಕರ ಗಮನಕ್ಕೂ ತಂದಿದ್ದೇವೆ- ಪೋಷಕರು:
ವಿದ್ಯಾರ್ಥಿಯ ಪಾಲಕರಾದ ಬಸವರಾಜ ದೊಡ್ಡಮನಿ ಮಾತನಾಡಿ, “ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಗಮನಕ್ಕೂ ತಂದಿದ್ದೇವೆ. ವಾರ್ಡನ್ ಕೂಡ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸುವ ಪರಿಸ್ಥಿತಿ ಎದುರಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಚಾರ್ಯರ ಸ್ಪಷ್ಟನೆ
ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯೆ ರುಕ್ಷೀಣಿಬಾಯಿ ಪವಾರ ಮಾತನಾಡಿ, “ಕಳ್ಳತನದ ಘಟನೆ ನಮ್ಮನ್ನೂ ನೋಯಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಶಾಲೆಯಿಂದ ತೆರಳಿರುವ ಕೆಲ ವಿದ್ಯಾರ್ಥಿಗಳ ಪಾತ್ರ ಇರುವ ಬಗ್ಗೆ ಮಾಹಿತಿ ದೊರೆತಿದೆ. ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಪಾಲಕರಿಗೂ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಹಾಗೂ ಮುನ್ನೆಚ್ಚರಿಕೆ ವಹಿಸಲಾಗುವುದು” ಎಂದು ಹೇಳಿದರು.
ಅಧಿಕಾರಿಗಳಿಂದ ಪರಿಶೀಲನೆ ಭರವಸೆ
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವು ಬಡಿಗೇರ ಮಾತನಾಡಿ, “ಈ ಘಟನೆ ನಮ್ಮ ಗಮನಕ್ಕೆ ಪ್ರಾಚಾರ್ಯರಿಂದ ಬಂದಿಲ್ಲ. ಮಾಹಿತಿ ಪಡೆದು ಪರಿಶೀಲನೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಮಕ್ಕಳ ಭವಿಷ್ಯಕ್ಕೆ ಸೂಕ್ತ ವಾತಾವರಣ ಅಗತ್ಯ
ಜೀವನದ ಮೌಲ್ಯಗಳು, ಶಿಸ್ತು ಮತ್ತು ಆದರ್ಶಗಳನ್ನು ಕಲಿಸಬೇಕಾದ ವಸತಿ ಶಾಲೆಯಲ್ಲಿ ಇಂತಹ ಆರೋಪಗಳು ಕೇಳಿಬಂದಿರುವುದು ಆತಂಕಕಾರಿ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಪೋಷಕರ ಒತ್ತಾಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande