
ವಿಜಯಪುರ, 11 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾದ ಹಳೆ ಕೊಲ್ಹಾರ ಗ್ರಾಮವು ಕೇವಲ ಒಂದು ಊರಿನ ನೆನಪಲ್ಲ, ದೇಶದ ಇತಿಹಾಸದ ಮಹತ್ವದ ಘಟನೆಗಳಿಗೆ ಸಾಕ್ಷಿಯಾದ ಪುಣ್ಯಭೂಮಿಯಾಗಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ನೆಲಕ್ಕೆ ಭೇಟಿ ನೀಡಿದ್ದ ಐತಿಹಾಸಿಕ ಕ್ಷಣಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.
ಹಳೆ ಕೊಲ್ಹಾರದಲ್ಲಿ ಮಹಾತ್ಮ ಗಾಂಧೀಜಿಯವರ ಐತಿಹಾಸಿಕ ಭೇಟಿ :
ಮಹಾತ್ಮ ಗಾಂಧೀಜಿಯವರು 1921ರ ಮೇ 27ರಂದು ಖಾದಿ ಆಂದೋಲನದ ಪ್ರಚಾರದ ಉದ್ದೇಶದಿಂದ ಹಳೆ ಕೊಲ್ಹಾರಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ತಮ್ಮ ಪತ್ನಿ ಕಸ್ತೂರಬಾ ಗಾಂಧಿ ಅವರೊಂದಿಗೆ ಆಗಮಿಸಿದ್ದ ಗಾಂಧೀಜಿಯವರು ಗ್ರಾಮದ ‘ದೊಡ್ಡ ನಾಕೆ’ ಹಾಗೂ ಅಲ್ಲಿನ ರಾಮಲಿಂಗ ದೇವಸ್ಥಾನದ ಕಟ್ಟೆಗೆ ಭೇಟಿ ನೀಡಿದ್ದರು.
ರಾಮಲಿಂಗ ದೇವಸ್ಥಾನದ ಕಟ್ಟೆಯ ಮೇಲೆ ನಿಂತು ಜನರನ್ನು ಉದ್ದೇಶಿಸಿ ಹಿಂದಿ ಭಾಷೆಯಲ್ಲಿ ಖಾದಿಯ ಮಹತ್ವದ ಕುರಿತು ಭಾಷಣ ಮಾಡಿದ್ದರು. ಸ್ವದೇಶಿ ವಸ್ತುಗಳ ಬಳಕೆ, ಸ್ವಾವಲಂಬನೆ ಹಾಗೂ ರಾಷ್ಟ್ರ ನಿರ್ಮಾಣದ ಸಂದೇಶವನ್ನು ಅವರು ಜನರಿಗೆ ನೀಡಿದ್ದರು ಎಂಬುದು ಇತಿಹಾಸದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ.
ಆದರೆ ಇಂದು ಗಾಂಧೀಜಿಯವರ ಹೆಜ್ಜೆ ಗುರುತುಗಳನ್ನು ಹೊತ್ತಿದ್ದ ಆ ಸ್ಥಳವು ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಬೇಸಿಗೆಯಲ್ಲಿ ನದಿಯ ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಹಳೆಯ ನೆನಪುಗಳ ಕೆಲವು ಕುರುಹುಗಳನ್ನು ಕಾಣಲು ಸಾಧ್ಯವಾಗುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರ ವಾಸ್ತವ್ಯದ ನೆನಪು :
ಇದೇ ಹಳೆ ಕೊಲ್ಹಾರವು ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ವಾಸ್ತವ್ಯಕ್ಕೂ ಸಾಕ್ಷಿಯಾಗಿದೆ. 1964ರ ಮೇ 22ರಂದು ಆಲಮಟ್ಟಿ ಆಣೆಕಟ್ಟಿನ ಶಂಕುಸ್ಥಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸ್ತ್ರಿಯವರು ಹಳೆ ಕೊಲ್ಹಾರದಲ್ಲಿದ್ದ ಬ್ರಿಟಿಷರ ಕಾಲದ ಅಡಿ ಬಂಗಲೆ (Inspection Bungalow - IB) ಯಲ್ಲಿ ಒಂದು ರಾತ್ರಿ ತಂಗಿದ್ದರು ಎನ್ನಲಾಗಿದೆ.
ಆ ಸಮಯದಲ್ಲಿ ಆಲಮಟ್ಟಿ ಪ್ರದೇಶದಲ್ಲಿ ಸೂಕ್ತ ಭದ್ರತೆ ಹಾಗೂ ವಾಸ್ತವ್ಯ ವ್ಯವಸ್ಥೆಗಳ ಕೊರತೆ ಇದ್ದ ಕಾರಣ, ಪ್ರಧಾನ ಮಂತ್ರಿ ಆಗಿದ್ದ ಶಾಸ್ತ್ರಿಯವರಿಗೆ ಹಳೆ ಕೊಲ್ಹಾರದ ಐಬಿಯಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಐತಿಹಾಸಿಕ ಮಹತ್ವ ಹೊಂದಿದ್ದ ಈ ಅಡಿ ಬಂಗಲೆಯೂ ಇಂದು ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.
ಇತಿಹಾಸದ ನೆನಪುಗಳನ್ನು ಉಳಿಸಬೇಕಾದ ಅಗತ್ಯ :
ಒಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ಹಳೆ ಕೊಲ್ಹಾರದಂತಹ ಐತಿಹಾಸಿಕ ಸ್ಥಳಗಳು ಜಲಾವೃತವಾಗಿದ್ದರೆ, ಮತ್ತೊಂದೆಡೆ ಇಂತಹ ಸ್ಥಳಗಳ ಇತಿಹಾಸವನ್ನು ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಬೇಸಿಗೆ ಸಮಯದಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಕಡಿಮೆಯಾದಾಗ ಹಳೆಯ ಕೊಲ್ಹಾರದ ಅವಶೇಷಗಳು ಹಾಗೂ ಅಡಿ ಬಂಗಲೆಯ ಕುರುಹುಗಳು ಕಾಣಿಸಿಕೊಳ್ಳುತ್ತವೆ. ಇದು ಇತಿಹಾಸ ಪ್ರಿಯರು ಹಾಗೂ ಸ್ಥಳೀಯರಿಗೆ ಭಾವನಾತ್ಮಕ ಕ್ಷಣವಾಗಿದ್ದು, ದೇಶದ ಮಹಾನ್ ನಾಯಕರ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande