
ಬಾಗಲಕೋಟೆ, 11 ಜೂನ್ (ಹಿ.ಸ.) :
ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ವಿದ್ಯುತ್ ವಿತರಣಾ ವ್ಯವಸ್ಥೆಯ ಕಾರ್ಯಚಟುವಟಿಕೆಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ಹೆಸ್ಕಾಂ ಸಿಬ್ಬಂದಿ ನಗರದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿದ್ಯುತ್ ಕ್ಷೇತ್ರವು ಸಾರ್ವಜನಿಕ ಸೇವೆಯ ಪ್ರಮುಖ ಭಾಗವಾಗಿದ್ದು, ಇದನ್ನು ಖಾಸಗಿ ಸಂಸ್ಥೆಗಳ ಕೈಗೆ ಒಪ್ಪಿಸುವುದರಿಂದ ಗ್ರಾಹಕರು ಹಾಗೂ ನೌಕರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಇಲಾಖೆಯಲ್ಲಿನ ಅನುಭವ ಹೊಂದಿರುವ ಸಿಬ್ಬಂದಿಯ ಸೇವೆಯನ್ನು ಪರಿಗಣಿಸಿ, ಖಾಸಗೀಕರಣದ ನಿರ್ಧಾರವನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯ ವೇಳೆ ಹೆಸ್ಕಾಂ ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಘೋಷಣೆಗಳನ್ನು ಕೂಗಿದರು. ವಿದ್ಯುತ್ ಪೂರೈಕೆ, ನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಕಾಪಾಡಲು ಸರ್ಕಾರಿ ವ್ಯವಸ್ಥೆಯೇ ಸೂಕ್ತವಾಗಿದೆ.
ಖಾಸಗೀಕರಣದಿಂದ ವಿದ್ಯುತ್ ದರ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಸಿಬ್ಬಂದಿ ಅಭಿಪ್ರಾಯಪಟ್ಟರು.
ಪ್ರತಿಭಟನೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಸ್. ಧಡೂತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರವೀಂದ್ರ ಮೆಟಗುಡ್ಡ, ರಾಜೇಶ ಹಂಡಿ, ಹೆಸ್ಕಾಂ ಲೆಕ್ಕಾಧಿಕಾರಿ ರಮೇಶ ಬಂಗೆನ್ನವರ, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಮಹಾದೇವ ಕುಂಚನೂರ ಸೇರಿದಂತೆ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿ ಭಾಗವಹಿಸಿದ್ದರು.
ಸರ್ಕಾರವು ವಿದ್ಯುತ್ ಕ್ಷೇತ್ರದ ಖಾಸಗೀಕರಣ ಕುರಿತು ಮರುಪರಿಶೀಲನೆ ನಡೆಸಿ, ನೌಕರರು ಹಾಗೂ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande