
ಬೆಂಗಳೂರು, 11 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ಕಸ ಟೆಂಡರ್ ಹಗರಣದ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಟೀಕೆಗಳಿಗೆ ತಿರುಗೇಟು ನೀಡಿರುವ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ನಾನು ಮಾಫಿಯಾದ ಏಜೆಂಟ್ ಅಲ್ಲ, ಜನರ ಏಜೆಂಟ್ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ತಮ್ಮ ಹೇಳಿಕೆಯಲ್ಲಿ ಅಶೋಕ್, ಮುಖ್ಯಮಂತ್ರಿ ಶಿವಕುಮಾರ್ ಅವರು ತಮ್ಮನ್ನು ಮಾಫಿಯಾ ಏಜೆಂಟ್ ಎಂದು ಕರೆದಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಕರ್ನಾಟಕದ ಏಳೂವರೆ ಕೋಟಿ ಜನರ ಹಕ್ಕಿಗಾಗಿ ಹಾಗೂ ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರ ಧ್ವನಿಯಾಗಿ ಮಾತನಾಡುತ್ತಿದ್ದೇನೆ. ವಿಪಕ್ಷ ನಾಯಕನಾಗಿ ಸರ್ಕಾರದ ಅಕ್ರಮಗಳನ್ನು ಪ್ರಶ್ನಿಸುವುದು ನನ್ನ ಸಂವಿಧಾನಬದ್ಧ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಅವರ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ನಿಮ್ಮ ಸ್ವಂತ ಪಕ್ಷದ ಶಾಸಕರೇ ಮಾಧ್ಯಮಗಳ ಮುಂದೆ ಅಸಮಾಧಾನ ಹೊರಹಾಕುತ್ತಾ ದೆಹಲಿಗೆ ದಂಡೆತ್ತಿ ಹೋಗುತ್ತಿರುವಾಗ, ಪ್ರತಿ ಪಕ್ಷಗಳಿಗೆ ಹನಿಮೂನ್ ಅವಧಿ ಸಿಗಲಿಲ್ಲ ಎಂದು ದೂರು ಹೇಳುವುದರಲ್ಲಿ ಅರ್ಥವಿಲ್ಲ ಎಂದು ಟೀಕಿಸಿದ್ದಾರೆ.
ಸರ್ಕಾರದ ಪಾರದರ್ಶಕತೆ ಕುರಿತ ಮುಖ್ಯಮಂತ್ರಿಯವರ ಹೇಳಿಕೆಯನ್ನು ವ್ಯಂಗ್ಯವಾಡಿದ ಅವರು, ನಮ್ಮ ಪಾರದರ್ಶಕತೆ ಮತ್ತು ಕಾರ್ಯವೈಖರಿಯನ್ನು ಸಹಿಸಲು ಆಗುತ್ತಿಲ್ಲ ಎಂಬ ಹೇಳಿಕೆ ಶತಮಾನದ ಅತಿ ದೊಡ್ಡ ಹಾಸ್ಯ ಎಂದು ಹೇಳಿದ್ದಾರೆ.
ಬೆಂಗಳೂರು ಕಸ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದ ಅಶೋಕ್, ಈ ಕುರಿತು ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ವರದಿ ಬಹಿರಂಗಗೊಳಿಸುವಂತೆ ಆಗ್ರಹಿಸಿದ್ದಾರೆ.
ವರದಿ ಸಲ್ಲಿಸಲು ನೀಡಿದ್ದ ಒಂದು ವಾರದ ಗಡುವು ಮುಕ್ತಾಯವಾಗಿದೆ. ಸರ್ಕಾರದಲ್ಲಿ ಪಾರದರ್ಶಕತೆ ಇದ್ದರೆ ವರದಿಯನ್ನು ತಕ್ಷಣ ಸಾರ್ವಜನಿಕರ ಮುಂದಿಡಲಿ ಎಂದು ಸವಾಲು ಹಾಕಿದ್ದು, ವರದಿ ಬಹಿರಂಗವಾದರೆ ಸರ್ಕಾರದ ಕಾರ್ಯವೈಖರಿ ಹಾಗೂ ಆರೋಪಗಳ ಸತ್ಯಾಸತ್ಯತೆಯನ್ನು ಜನರೇ ನಿರ್ಧರಿಸುತ್ತಾರೆ ಎಂದು ಅಶೋಕ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.