ರೈತರಿಂದ ಮಣ್ಣಿನ ಆರೋಗ್ಯ ಸಂರಕ್ಷಣೆಗೆ ಒತ್ತು
ಗದಗ, 11 ಜೂನ್ (ಹಿ.ಸ.) : ಆ್ಯಂಕರ್ : ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವುದು, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ರೈತರ ಆದಾಯ ವೃದ್ಧಿಗೆ ಪೂರಕವಾದ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಗದಗ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಂ
ಫೋಟೋ


ಗದಗ, 11 ಜೂನ್ (ಹಿ.ಸ.) :

ಆ್ಯಂಕರ್ : ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವುದು, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ರೈತರ ಆದಾಯ ವೃದ್ಧಿಗೆ ಪೂರಕವಾದ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಗದಗ ಹಾಗೂ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಖೇತ್ ಬಚಾವೋ ಅಭಿಯಾನದಡಿ ಸಮತೋಲಿತ ರಸಗೊಬ್ಬರಗಳ ಬಳಕೆ ಹಾಗೂ ಬೀಜೋಪಚಾರ ಆಂದೋಲನ ಕಾರ್ಯಕ್ರಮವನ್ನು ಗದಗ ತಾಲೂಕಿನ ಬೂದಿಶ್ವರ ಹೊಸಳ್ಳಿ ಮತ್ತು ಶ್ಯಾಗೋಟಿ ಗ್ರಾಮಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈತರಿಗೆ ಮಣ್ಣಿನ ಫಲವತ್ತತೆ ಕಾಪಾಡುವ ಕ್ರಮಗಳು, ಸಮತೋಲಿತ ಗೊಬ್ಬರ ಬಳಕೆಯ ಅಗತ್ಯತೆ, ಸಾವಯವ ಕೃಷಿಯ ಮಹತ್ವ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಣ್ಣು ಪರೀಕ್ಷೆಯ ಮಹತ್ವವನ್ನು ವಿವರಿಸಿ, ಮಣ್ಣಿನ ಪರೀಕ್ಷಾ ವರದಿಯ ಆಧಾರದ ಮೇಲೆ ಮಾತ್ರ ಗೊಬ್ಬರ ಬಳಕೆ ಮಾಡುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಸಮತೋಲನ ಹಾಳಾಗುವುದಲ್ಲದೆ, ಭೂಮಿಯ ಉತ್ಪಾದಕತೆ ಕುಸಿಯುವ ಅಪಾಯವಿದೆ ಎಂದು ಎಚ್ಚರಿಸಿದರು.

ರೈತರಿಗೆ ಸಮತೋಲಿತ ರಸಗೊಬ್ಬರ ಬಳಕೆಯ ಬಗ್ಗೆ ಮಾಹಿತಿ ನೀಡಿದ ವಿಜ್ಞಾನಿಗಳು, ನೈಟ್ರೋಜನ್, ಫಾಸ್ಪರಸ್ ಹಾಗೂ ಪೊಟ್ಯಾಶ್ ಅಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಬಳಸುವ ಮೂಲಕ ಬೆಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಜೊತೆಗೆ ಹಸಿರು ಗೊಬ್ಬರ, ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.

ಬೀಜೋಪಚಾರದ ಮಹತ್ವದ ಕುರಿತು ಪ್ರಾಯೋಗಿಕ ಪ್ರದರ್ಶನ ನಡೆಸಿದ ತಜ್ಞರು, ಬಿತ್ತನೆಗೂ ಮುನ್ನ ಬೀಜಗಳಿಗೆ ಸೂಕ್ತ ರೀತಿಯಲ್ಲಿ ಔಷಧಿ ಹಾಗೂ ಜೈವಿಕ ಸಂಸ್ಕರಣೆ ಮಾಡುವುದರಿಂದ ಬೀಜಜನ್ಯ ರೋಗಗಳು ಮತ್ತು ಕೀಟಗಳ ಹಾವಳಿಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಉತ್ತಮ ಮೊಳಕೆ ಪ್ರಮಾಣ ಹಾಗೂ ಆರೋಗ್ಯಕರ ಬೆಳವಣಿಗೆಗಾಗಿ ಬೀಜೋಪಚಾರ ಅತ್ಯಗತ್ಯ ಎಂದು ರೈತರಿಗೆ ಮನವರಿಕೆ ಮಾಡಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ವಿವಿಧ ಕೃಷಿ ಯೋಜನೆಗಳು, ಸಬ್ಸಿಡಿ ಸೌಲಭ್ಯಗಳು, ಬೆಳೆ ವಿಮೆ, ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ಇಲಾಖೆಯಿಂದ ದೊರೆಯುವ ನೆರವುಗಳ ಕುರಿತು ವಿವರವಾದ ಮಾಹಿತಿ ನೀಡಿದರು. ರೈತರು ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪಾದನೆ ಸಾಧಿಸಬಹುದು ಎಂದು ತಿಳಿಸಿದರು.

ಖೇತ್ ಬಚಾವೋ ಅಭಿಯಾನದಡಿ ನೀರಿನ ಸಮರ್ಪಕ ಬಳಕೆ, ಮಳೆನೀರು ಸಂಗ್ರಹಣೆ, ಸಮಗ್ರ ಕೀಟ ನಿರ್ವಹಣೆ, ಪರಿಸರ ಸಂರಕ್ಷಣೆ ಹಾಗೂ ಸಾವಯವ ಕೃಷಿ ಪದ್ಧತಿಗಳ ಅಳವಡಿಕೆ ಕುರಿತು ಜಾಗೃತಿ ಮೂಡಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ದೀರ್ಘಕಾಲಿಕ ಅಭಿವೃದ್ಧಿ ಸಾಧಿಸಲು ಮಣ್ಣಿನ ಆರೋಗ್ಯ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ರೈತರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ತಜ್ಞರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಹಾಗೂ ರೈತ ಮಹಿಳೆಯರು ವಿವಿಧ ಕೃಷಿ ಸಮಸ್ಯೆಗಳ ಕುರಿತು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಮಾನಗಳಿಗೆ ಪರಿಹಾರ ಪಡೆದುಕೊಂಡರು. ಸಮತೋಲಿತ ಗೊಬ್ಬರ ಬಳಕೆ ಹಾಗೂ ಬೀಜೋಪಚಾರ ಕುರಿತು ನೀಡಲಾದ ಮಾಹಿತಿ ಕೃಷಿ ಚಟುವಟಿಕೆಗಳಿಗೆ ಬಹಳ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಖೇತ್ ಬಚಾವೋ ಅಭಿಯಾನವು ರೈತರಲ್ಲಿ ಹೊಸ ಅರಿವು ಮೂಡಿಸುವುದರ ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚಿಸಲು ನೆರವಾಗಲಿದೆ ಎಂದು ಪ್ರಗತಿಪರ ರೈತರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಚೇತನಾ ಪಾಟೀಲ, ಉಪ ಕೃಷಿ ನಿರ್ದೇಶಕರಾದ ಶ್ರೀಮತಿ ಸ್ಪೂರ್ತಿ ಜಿ.ಎಸ್., ಎನ್.ಎಚ್. ಭಂಡಿ, ಪ್ರವೀಣ ಕರಿಕಟ್ಟಿ, ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ ವಿಜ್ಞಾನಿಗಳು, ಕೃಷಿ ಅಧಿಕಾರಿಗಳಾದ ಶ್ರೀಮತಿ ರಾಜರಾಜೇಶ್ವರಿ ಚಿನಿವಾರ ಹಾಗೂ ಬಸವರಾಜೇಶ್ವರಿ ಸಜ್ಜನರ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಪ್ರಗತಿಪರ ರೈತ ವಿಜಯಕುಮಾರ ಸುಂಕದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೂದಿಶ್ವರ ಹೊಸಳ್ಳಿ, ಕುರ್ತಕೋಟಿ, ಶ್ಯಾಗೋಟಿ, ದುಂದೂರ, ಚಿಕ್ಕಹಂದಿಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು, ರೈತ ಮಹಿಳೆಯರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಗೃತಿ ಅಭಿಯಾನದ ಪ್ರಯೋಜನ ಪಡೆದುಕೊಂಡರು.

ಕೃಷಿ ಕ್ಷೇತ್ರದಲ್ಲಿ ಸುಸ್ಥಿರತೆ ಹಾಗೂ ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ವಿಸ್ತರಣೆಗೆ ಇಂತಹ ಕಾರ್ಯಕ್ರಮಗಳು ಮಹತ್ವದ ಕೊಡುಗೆ ನೀಡಲಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande