ಜೆಎಸ್ಡಬ್ಲ್ಯೂ 100 ಅಭ್ಯರ್ಥಿಗಳಿಗೆ ಚಾಲನಾ ತರಬೇತಿ
ತೋರಣಗಲ್ಲು, 11 ಜೂನ್ (ಹಿ.ಸ.) : ಆ್ಯಂಕರ್ : ಗ್ರಾಮೀಣ ಭಾಗದ ಯುವಜನರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗ ಮತ್ತು ಸ್ವಾವಲಂಬಿ ಬದುಕಿನತ್ತ ಕೊಂಡೊಯ್ಯುವ ಉದ್ದೇಶದಿಂದ ಜೆಎಸ್ಡಬ್ಲ್ಯೂ ಫೌಂಡೇಶನ್ ತೋರಣಗಲ್ಲು ಒಪಿಜೆ ಕೇಂದ್ರದಲ್ಲಿ ಆಯೋಜಿಸಿದ್ದ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿ ಕಾರ್ಯಕ್ರಮದ
ಜೆಎಸ್ಡಬ್ಲ್ಯೂ 100 ಅಭ್ಯರ್ಥಿಗಳಿಗೆ ಚಾಲನಾ ತರಬೇತಿ


ತೋರಣಗಲ್ಲು, 11 ಜೂನ್ (ಹಿ.ಸ.) :

ಆ್ಯಂಕರ್ : ಗ್ರಾಮೀಣ ಭಾಗದ ಯುವಜನರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗ ಮತ್ತು ಸ್ವಾವಲಂಬಿ ಬದುಕಿನತ್ತ ಕೊಂಡೊಯ್ಯುವ ಉದ್ದೇಶದಿಂದ ಜೆಎಸ್ಡಬ್ಲ್ಯೂ ಫೌಂಡೇಶನ್ ತೋರಣಗಲ್ಲು ಒಪಿಜೆ ಕೇಂದ್ರದಲ್ಲಿ ಆಯೋಜಿಸಿದ್ದ ಲಘು ಹಾಗೂ ಭಾರಿ ವಾಹನ ಚಾಲನಾ ತರಬೇತಿ ಕಾರ್ಯಕ್ರಮದಡಿ ತರಬೇತಿ ಪೂರ್ಣಗೊಳಿಸಿದ 100 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಚಾಲನಾ ಪರವಾನಗಿ (ಡಿಎಲ್) ವಿತರಿಸಲಾಯಿತು.

ಕಳೆದ ನವೆಂಬರ್ನಲ್ಲಿ ಆರಂಭಗೊಂಡ ಈ ಯೋಜನೆಯಡಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ವೃತ್ತಿಪರ ಚಾಲನಾ ಕೌಶಲ್ಯ, ರಸ್ತೆ ಸುರಕ್ಷತೆ ಹಾಗೂ ಉದ್ಯೋಗಕ್ಕೆ ಅಗತ್ಯವಾದ ತರಬೇತಿಯನ್ನು ನೀಡಲಾಯಿತು. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC) ಹಾಗೂ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ (LSSC) ಮಾನ್ಯತೆ ಪಡೆದ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (NSQF) ಹಂತ-4ಕ್ಕೆ ಅನುಗುಣವಾಗಿ ತರಬೇತಿ ನಡೆಸಲಾಯಿತು.

ಪ್ರಮಾಣಪತ್ರ ಪಡೆದವರಲ್ಲಿ 75 ಅಭ್ಯರ್ಥಿಗಳು ಲಘು ಮೋಟಾರ್ ವಾಹನ (LMV) ಹಾಗೂ 25 ಅಭ್ಯರ್ಥಿಗಳು ಭಾರಿ ಮೋಟಾರ್ ವಾಹನ (HMV) ಚಾಲನಾ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವಿಶೇಷವೆಂದರೆ, ತರಬೇತಿ ಪಡೆದ ಎಲ್ಲ 100 ಅಭ್ಯರ್ಥಿಗಳಿಗೂ ಚಾಲನಾ ಪರವಾನಗಿ ದೊರೆತಿದ್ದು, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅವರು ಸಜ್ಜಾಗಿದ್ದಾರೆ.

ಈ ಬ್ಯಾಚ್ನ ಮತ್ತೊಂದು ವಿಶೇಷವೆಂದರೆ ತರಬೇತಿ ಪೂರ್ಣಗೊಳಿಸಿದ 100 ಅಭ್ಯರ್ಥಿಗಳಲ್ಲಿ 32 ಮಹಿಳಾ ಅಭ್ಯರ್ಥಿಗಳಿದ್ದು, ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರು ಹೊಸ ಅವಕಾಶಗಳನ್ನು ಸ್ವೀಕರಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಜೀವನೋಪಾಯ ಸೃಷ್ಟಿ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮದ ಸಂದರ್ಭದಲ್ಲಿ 5 ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಿಗೂ ಚಾಲನೆ ನೀಡಲಾಯಿತು. ಡಿಬಿ ಸ್ಕಿಲ್ಸ್ ಫೌಂಡೇಶನ್ ಹಾಗೂ ಕೀಪ್ ಮೂವಿಂಗ್ ಲಾಜಿಸ್ಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಈ ಯೋಜನೆ ಜಾರಿಗೊಂಡಿದ್ದು, ವಾಹನ ಮಾಲೀಕತ್ವ, ಗುತ್ತಿಗೆ ಆಧಾರಿತ ಉದ್ಯಮಶೀಲತೆ ಹಾಗೂ ಉದ್ಯೋಗಾವಕಾಶಗಳತ್ತ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ನ ಸಿಇಒ ರವಿಕಾಂತಯ್ಯ ಮೂರ್ತಿ, “ಎನ್ಎಸ್ಕ್ಯೂಎಫ್ ಹಂತ-4 ಪ್ರಮಾಣೀಕರಣವು ದ್ವಿತೀಯ ಪಿಯುಸಿ ವಿದ್ಯಾರ್ಹತೆಗೆ ಸಮಾನವಾಗಿದೆ. ದೇಶದ ಜೊತೆಗೆ ಜರ್ಮನಿ ಸೇರಿದಂತೆ ವಿದೇಶಗಳಲ್ಲಿಯೂ ಕೌಶಲ್ಯಯುತ ಚಾಲಕರಿಗೆ ಹೆಚ್ಚಿನ ಬೇಡಿಕೆಯಿದ್ದು, ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳಿಗೆ ಅಗತ್ಯವಾದ ತರಬೇತಿಯನ್ನು ಸ್ಥಳೀಯ ಅಭ್ಯರ್ಥಿಗಳಿಗೆ ನೀಡುವ ಉದ್ದೇಶವಿದೆ” ಎಂದು ಹೇಳಿದರು.

ಜೆಎಸ್ಡಬ್ಲ್ಯೂ ಸ್ಟೀಲ್ನ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ ಮಾತನಾಡಿ, “ಇಂದಿನ ಅಭಿವೃದ್ಧಿ ಚಕ್ರಗಳ ಮೇಲೆ ಸಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಅಭ್ಯರ್ಥಿಗಳಿಗೆ ಗೌರವಯುತ ಮತ್ತು ಶಾಶ್ವತ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಕೆಲಸ ಮಾಡುತ್ತವೆ” ಎಂದು ಅಭಿಪ್ರಾಯಪಟ್ಟರು.

ತೋರಣಗಲ್ಲು ಗ್ರಾಮದ ಅಭ್ಯರ್ಥಿ ಕೀರ್ತಿ ಮಾತನಾಡಿ, “ಈ ತರಬೇತಿ ನಮಗೆ ಕೇವಲ ವಾಹನ ಚಾಲನೆ ಕಲಿಸಿಲ್ಲ. ಆತ್ಮವಿಶ್ವಾಸ, ತಾಳ್ಮೆ ಮತ್ತು ಜವಾಬ್ದಾರಿಯ ಮಹತ್ವವನ್ನೂ ತಿಳಿಸಿಕೊಟ್ಟಿದೆ. ಚಾಲನಾ ಪರವಾನಗಿ ಎನ್ನುವುದು ಕೇವಲ ಒಂದು ದಾಖಲೆಯಲ್ಲ, ನಮ್ಮ ಮತ್ತು ಇತರರ ಜೀವದ ಸುರಕ್ಷತೆಯ ಜವಾಬ್ದಾರಿಯೂ ಆಗಿದೆ” ಎಂದು ತಮ್ಮ ಅನುಭವ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜೆಎಸ್ಡಬ್ಲ್ಯೂ ಫೌಂಡೇಶನ್ನ ದಕ್ಷಿಣ ವಲಯ ಮುಖ್ಯಸ್ಥ ಪೆದ್ದಣ್ಣ ಬೀಡಲಾ , ಜೆಎಸ್ಡಬ್ಲ್ಯೂ ಎನರ್ಜಿ ಲಿಮಿಟೆಡ್ನ ಶ್ರೀಕಾಂತ್ ಹೆಗಡೆ ಜೆಎಸ್ಡಬ್ಲ್ಯೂ ಫೌಂಡೇಶನ್ನ ಶ್ರೇಷ್ಠ ಭಟ್ಟಾಚಾರ್ಜಿ, ಡಿಬಿ ಸ್ಕಿಲ್ಸ್ ಫೌಂಡೇಶನ್ನ ಗೋಪಾಲ್ ಮಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande