
ಕೋಲಾರ, ೧೧ ಜೂನ್ (ಹಿ.ಸ) :
ಆ್ಯಂಕರ್ : ವ್ಯಕ್ತಿಗಳ ಜೀವನ-ಸಾಧನೆ ಕುರಿತ ಬಯೋಪಿಕ್ಗಳು, ಘಟನೆ-ವಿದ್ಯಮಾನಗಳ ಫೈಲ್ಗಳು ಬೆಳ್ಳಿ ತೆರೆಯಲ್ಲಿ ರಾರಾಜಿಸುವ ಕಾಲಘಟ್ಟದಲ್ಲಿ ಅಪರೂಪಕ್ಕೆ ಎಂಬ0ತೆ ಇದೇ ಪ್ರಕಾರಕ್ಕೆ ಸೇರಬಹುದಾದ ಒಂದು ಬಯೋಡ್ರಾಮಾ ರಂಗಭೂಮಿಯಲ್ಲಿ ಪ್ರದರ್ಶನಗೊಂಡಿರುವುದು ಗಮನಾರ್ಹವಾಗಿದೆ.
ವೈವಿಧ್ಯಮಯ ಸಾಂಸ್ಕೃತಿಕ ಮತ್ತು ರಂಗಭೂಮಿ ಚಟುವಟಿಕೆಗಳ ಮೂಲಕ ಕರ್ನಾಟಕದ ಸಾಂಸ್ಕೃತಿಕ ಚಳವಳಿಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೋಲಾರದ `ಆದಿಮ’ ಸಂಘಟನೆಯ ಕಾರ್ಯಕ್ರಮದಲ್ಲಿ ಪ್ರಸ್ತುತಿಗೊಂಡ `ಖಾಕಿಯೊಳಗಿನ ಸಂತ' ನಾಟಕ ಪ್ರದರ್ಶನಗೊಂಡಿತು.
ಬೆAಗಳೂರು ಮಹಾನಗರ ಸಾರಿಗೆ ನಿಗಮದ ಸಾಂಸ್ಕೃತಿಕ ಕಲಾ ಕುಟೀರದ ಕಲಾವಿದರು ತೇರಹಳ್ಳಿ ಬೆಟ್ಟದ ಬಂಡೆಗಳ ನಡುವಿನ ಬಯಲು ರಂಗಮAದಿರದಲ್ಲಿ ನಾಟಕವನ್ನು ಪ್ರದರ್ಶಿಸಿದರು. ಭ್ರಷ್ಟಾಚಾರದ ಹುಲ್ಲುಗಾವಲು ಹಾಗೂ ದರ್ಪ-ಕ್ರೌರ್ಯದ ತಾಣವೆಂಬ ಕಪ್ಪುಚುಕ್ಕೆ ಹೊಂದಿರುವ ಪೊಲೀಸ್ ಇಲಾಖೆಯನ್ನು ಆ ಕಳಂಕದಿ0ದ ಹೊರತರುವ ರೀತಿಯಲ್ಲಿ ಪೊಲೀಸ್ ಸೇವೆಯಲ್ಲಿದ್ದೇ ಪ್ರಾಮಾಣಿಕತೆ ಹಾಗೂ ಮಾನವೀಯ ಅಂತಃಕರಣದಿAದ ನಡೆದು ಮಾದರಿಯಾದ ಐಪಿಎಸ್ ಅಧಿಕಾರಿ ಡಾ. ಕೆ. ಮಧುಕರ ಶೆಟ್ಟಿ ಅವರ ಜೀವನ ಆಧಾರಿತ ನಾಟಕವೆನ್ನುವುದೇ ಇದರ ವಿಶೇಷತೆಯಾಗಿದೆ.
ಪ್ರಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಪುತ್ರನಾಗಿದ್ದ ಮಧುಕರ, ಪೊಲೀಸ್ ಇಲಾಖೆಯಲ್ಲಿದ್ದರೂ ತಂದೆಯ ಜಾಡಿನಲ್ಲೇ ಸಾಗಿ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಮೆರೆದವರು. ಮಾನವೀಯ ಮೌಲ್ಯಗಳನ್ನು ರಕ್ತಗತ ಮಾಡಿಕೊಂಡಿದ್ದರೂ ಕರ್ತವ್ಯ ನಿರ್ವಹಣೆಯಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಮಧುಕರ, ಪೊಲೀಸ್ ಇಲಾಖೆ ಹಾಗೂ ಲೋಕಾಯುಕ್ತದಲ್ಲಿದ್ದಾಗ ಕ್ರಿಮಿನಲ್ಗಳು ಮತ್ತು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದರು. ಖಾದಿ ಮತ್ತು ಕಾವಿಗಳ ನಡುವೆ `ಸಂತ'ರು ಮಾಯವಾಗುತ್ತಿದ್ದ ಸನ್ನಿವೇಶದಲ್ಲಿ ಖಾಕಿಯೊಳಗಿನ ಸಂತನಾಗಿ ಮೂಡಿಬಂದಿದ್ದ ಅನನ್ಯ ಜೀವನೋತ್ಸಾಹಿ, ಜೀವನಪ್ರೇಮಿ ಮಧುಕರ, ೪೭ರ ಹರೆಯದ ತೀರಾ ಸಣ್ಣ ಪ್ರಾಯದಲ್ಲೇ ಜೀವನಯಾತ್ರೆ ಮುಗಿಸಿದಾಗ ಆಘಾತದ ಅಲೆಯೇ ಎದ್ದಿತ್ತು. ಅನಾರೋಗ್ಯಪೀಡಿತರಾಗಿದ್ದ ಮಧುಕರ್ಗೆ ಸೂಕ್ತ ಚಿಕಿತ್ಸೆ ದೊರಕದೆ ಅವರು ಮೃತಪಟ್ಟರೆಂಬ ಆರೋಪವು ಕುಟುಂಬಸ್ಥರು ಹಾಗೂ ಅಭಿಮಾನಿ ವಲಯದಿಂದ ಕೇಳಿಬಂದಿತ್ತು.
ಕಣ್ಣಂಚಿನಲ್ಲಿ ನೀರು ಹನಿಸಿದ ಪ್ರಸಂಗಗಳು
ಜೆಎನ್ಯುನಿ0ದ ಎಂಎ ಹಾಗೂ ನ್ಯೂಯಾರ್ಕ್ನ ಆಲ್ಬನಿ ವಿವಿಯಿಂದ ಡಾಕ್ಟರೇಟ್ ಪದವಿ ಗಳಿಸಿದ್ದ ಮಧುಕರ್, ಪೊಲೀಸ್ ವೃತ್ತಿಗೆ ಸೇರಿದ ನಂತರ ಎದುರಿಸಿದ್ದ ಪ್ರಸಂಗಗಳನ್ನು ಎಚ್ಚರದಿಂದ ಪೋಣಿಸಿ ದೃಶ್ಯಗಳನ್ನಾಗಿ ರಂಗದ ಮೇಲೆ ಪ್ರಯೋಗಿಸಿದ್ದಾರೆ ನಾಟಕವನ್ನು ರಚಿಸಿ ನಿರ್ದೇಶನದ ಹೊಣೆಯನ್ನೂ ನಿರ್ವಹಿಸಿರುವ ಬಿಎಂಟಿಸಿ ಸಿಬ್ಬಂದಿ ಸಿದ್ದರಾಮ ಕೊಪ್ಪರ್.
ಕಡಲೆಕಾಯಿ ವ್ಯಾಪಾರಿಯೊಬ್ಬನಿಂದ ಒಬ್ಬ ಕಾನ್ಸ್ಟೇಬಲ್ ೫೦ ರೂಪಾಯಿ ಕಿತ್ತುಕೊಂಡಿದ್ದ ಆರೋಪ ಬಂದಿದ್ದಾಗ ಅವರಿಬ್ಬರನ್ನೂ ಕರೆಸಿಕೊಂಡು ಮಾತುಕತೆ ನಡೆಸಿ ತನ್ನಲ್ಲಿದ್ದ ೧,೩೫೦ ರೂ.ಗಳನ್ನು ಉಭಯತ್ರರಿಗೆ ಕೊಟ್ಟಿದ್ದ ಮಾನವೀಯ ಅಂತಃಕರಣದ ವ್ಯಕ್ತಿ ಮಧುಕರ. ಈ ಸನ್ನಿವೇಶ ರಂಗದ ಮೇಲೆ ಆರ್ದ್ರವಾಗಿ ಮೂಡಿಬಂದು ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಹನಿಯುವಂತೆ ಮಾಡಿದ್ದು ನಾಟಕದ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ.
ಚಾಲಕರು, ನಿರ್ವಾಹಕರು, ಡಿಪೋ ಟೆಕ್ನೀಶಿಯನ್ಗಳು -ಈ ರೀತಿಯಾಗಿ ಬಿಎಂಟಿಸಿಯ ವಿವಿಧ ವಿಭಾಗಗಳಲ್ಲಿ ದುಡಿಯುವ ಉದ್ಯೋಗಿಗಳು ವೃತ್ತಿಜೀವನದ ಜಂಜಡದ ನಡುವೆಯೇ ಸಾಂಸ್ಕೃತಿಕವಾಗಿ ಅರಳಲು ಕಲಾ ಕುಟೀರ ವೇದಿಕೆಯಾಗಿದೆ. ಹವ್ಯಾಸಿಗಳಾದರೂ ಈ ಕಲಾವಿದರು ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆಯಾ ಪಾತ್ರಗಳಿಗೆ ನ್ಯಾಯ ಒದಗಿಸಿ ಮೆಚ್ಚುಗೆಗೆ ಪಾತ್ರರಾದರು. ಮಧುಕರ್ ಪಾತ್ರಧಾರಿ ರಂಗಸ್ವಾಮಿ ಪಾತ್ರಕ್ಕೆ ಜೀವತುಂಬಿ ಗಮನ ಸೆಳೆಯುತ್ತಾರೆ.
ಉಮಾ ಪಿ ಸಹ ನಿರ್ದೇಶನ, ದೇಶಿ ಮೋಹನ್ ಸಂಗೀತ, ಜಯರಾಜ್ ಹೊಸ್ಕೂರ್ ಪ್ರಸಾದನ ಮತ್ತು ಮಹೇಂದ್ರ ಕುಮಾರ್ರ ಬೆಳಕು ಸಂಯೋಜನೆ ಹೊಂದಿದ್ದ `ಖಾಕಿಯೊಳಗಿನ ಸಂತ' ನಾಟಕ, ಸಾಮಾಜಿಕ ಮೌಲ್ಯಗಳು ಅಧಃಪತನ ಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಉತ್ತಮ ಸಂದೇಶ ಸಾರುವ ಮೌಲಿಕ ಪ್ರಯೋಗವಾಗಿ ದಾಖಲಾಗುತ್ತದೆ.
ಮಧುಕರರ ಸಹೋದ್ಯೋಗಿಗಳಾಗಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳಾದ ಬಿಎಂಟಿಸಿ ಭದ್ರತೆ ಹಾಗೂ ಜಾಗೃತಿ ನಿರ್ದೇಶಕ ಅಬ್ದುಲ್ ಅಹದ್ ಮತ್ತು ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದ ಡಿಐಜಿಪಿ ಆರ್. ದೇವರಾಜ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್