ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಗದಗ, 11 ಜೂನ್ (ಹಿ.ಸ.) : ಆ್ಯಂಕರ್ : ರಾಜ್ಯ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿರುವ ಹಿರಿಯ ನಾಯಕ ಹಾಗೂ ಗದಗ ಕ್ಷೇತ್ರದ ಶಾಸಕ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವುದು ಗದಗ ಜಿಲ್ಲೆಗೆ ಮತ್ತು ಅವರ ರಾಜಕೀಯ ಹಿರಿತನಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಕರ್ನಾಟಕ ಜನಪರ
ಫೋಟೋ


ಗದಗ, 11 ಜೂನ್ (ಹಿ.ಸ.) :

ಆ್ಯಂಕರ್ : ರಾಜ್ಯ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿರುವ ಹಿರಿಯ ನಾಯಕ ಹಾಗೂ ಗದಗ ಕ್ಷೇತ್ರದ ಶಾಸಕ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದೇ ಇರುವುದು ಗದಗ ಜಿಲ್ಲೆಗೆ ಮತ್ತು ಅವರ ರಾಜಕೀಯ ಹಿರಿತನಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ವಾಲ್ಮೀಕಿ ಸಮಾಜದ ಯುವ ಮುಖಂಡ ಸುರೇಶ ಬೆಳಧಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಚ್.ಕೆ. ಪಾಟೀಲ್ ಅವರು ರಾಜ್ಯ ರಾಜಕಾರಣದಲ್ಲಿ ಹಲವು ದಶಕಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಪ್ರಾಮಾಣಿಕತೆ, ಜನಪರ ಕಾಳಜಿ ಹಾಗೂ ಅಭಿವೃದ್ಧಿ ದೃಷ್ಟಿಕೋನದ ಮೂಲಕ ವಿಶಿಷ್ಟ ಸ್ಥಾನವನ್ನು ಸಂಪಾದಿಸಿದ್ದಾರೆ ಎಂದು ತಿಳಿಸಿದ್ದಾರೆ. ಇಂತಹ ಅನುಭವಿ ಮತ್ತು ದೂರದೃಷ್ಟಿಯ ನಾಯಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡದಿರುವುದು ಕೇವಲ ವ್ಯಕ್ತಿಯೊಬ್ಬರಿಗೆ ಆಗಿರುವ ಅನ್ಯಾಯವಲ್ಲ, ಜಿಲ್ಲೆಯ ಜನತೆಯ ಆಶೋತ್ತರಗಳಿಗೆ ಉಂಟಾದ ನಿರಾಸೆಯಾಗಿದೆ ಎಂದು ಹೇಳಿದ್ದಾರೆ.

ಎಚ್.ಕೆ. ಪಾಟೀಲ್ ಅವರು ಗದಗ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದು, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕುಡಿಯುವ ನೀರು, ರಸ್ತೆ ಹಾಗೂ ವಿವಿಧ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಆಡಳಿತಾತ್ಮಕ ಅನುಭವ ಮತ್ತು ರಾಜಕೀಯ ಪಕ್ವತೆ ರಾಜ್ಯದ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದೆ. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಇಂತಹ ಹಿರಿಯ ನಾಯಕರನ್ನು ಸಚಿವ ಸಂಪುಟದಿಂದ ಹೊರಗಿಡುವುದು ರಾಜಕೀಯವಾಗಿ ಸಮರ್ಥಿಸಿಕೊಳ್ಳಲಾಗದ ನಿರ್ಧಾರವಾಗಿದೆ ಎಂದು ಬೆಳಧಡಿ ಅಭಿಪ್ರಾಯಪಟ್ಟಿದ್ದಾರೆ.

ಗದಗ ಜಿಲ್ಲೆಗೆ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನಮಾನವಿದ್ದು, ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿ ನಿರಂತರ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದಾಗ್ಯೂ ಸಚಿವ ಸಂಪುಟ ರಚನೆಯಲ್ಲಿ ಜಿಲ್ಲೆಯ ಹಿರಿಯ ನಾಯಕರಿಗೆ ಸಮರ್ಪಕ ಸ್ಥಾನಮಾನ ದೊರೆಯದಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಈ ಬೆಳವಣಿಗೆ ನಿರಾಸೆ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರು ಜಿಲ್ಲೆಯ ಜನರ ಭಾವನೆಗಳಿಗೆ ಗೌರವ ನೀಡಬೇಕು. ಮುಂಬರುವ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್.ಕೆ. ಪಾಟೀಲ್ ಅವರಿಗೆ ಪ್ರಮುಖ ಮತ್ತು ಜವಾಬ್ದಾರಿಯುತ ಖಾತೆಯೊಂದಿಗೆ ಸಚಿವ ಸ್ಥಾನ ನೀಡುವ ಮೂಲಕ ಅವರ ಅನುಭವವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸುರೇಶ ಬೆಳಧಡಿ ಒತ್ತಾಯಿಸಿದ್ದಾರೆ.

ಹಿರಿಯ ನಾಯಕರನ್ನು ಕಡೆಗಣಿಸುವುದು ಪಕ್ಷದ ಕಾರ್ಯಕರ್ತರ ಮನೋಬಲ ಕುಗ್ಗಿಸುವುದರ ಜೊತೆಗೆ ಜನತೆಯಲ್ಲೂ ತಪ್ಪು ಸಂದೇಶ ರವಾನಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತಕ್ಷಣ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಒಂದು ವೇಳೆ ಮುಂದಿನ ದಿನಗಳಲ್ಲಿಯೂ ಎಚ್.ಕೆ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸುವ ಕ್ರಮ ಮುಂದುವರಿದರೆ, ಗದಗ ಮತಕ್ಷೇತ್ರದ ಜನತೆ, ಯುವಕರು ಹಾಗೂ ವಿವಿಧ ಸಮಾಜಗಳ ಮುಖಂಡರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ನಡೆಸಲಾಗುವುದು ಎಂದು ಸುರೇಶ ಬೆಳಧಡಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಅನುಭವಿಗಳ ಮಾರ್ಗದರ್ಶನ ಅತ್ಯಗತ್ಯವಾಗಿದ್ದು, ಎಚ್.ಕೆ. ಪಾಟೀಲ್ ಅವರಂತಹ ಹಿರಿಯ ರಾಜಕಾರಣಿಗಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದರಿಂದ ಸರ್ಕಾರದ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದೆ. ಆದ್ದರಿಂದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಜನರ ನಿರೀಕ್ಷೆಗೆ ಸ್ಪಂದಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande