
ಬಳ್ಳಾರಿ, 11 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿರುವ ಪರಿಸರ ಹಾಗೂ ಜೀವವೈವಿಧ್ಯ ದೃಷ್ಟಿಯಿಂದ ಅತ್ಯಂತ ಮಹತ್ವದ ಜೌಗು ಪ್ರದೇಶವಾದ ‘ದರೋಜಿ ಕೆರೆ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ’ ಘೋಷಣೆಗೆ ಸಮಗ್ರ ಸಂಶೋಧನಾ ವರದಿ ಹಾಗೂ ಪ್ರಸ್ತಾವನೆಯನ್ನು ಇಂದು ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ್. ಕೆ.ಎನ್ ಅವರಿಗೆ ಸಲ್ಲಿಸಲಾಯಿತು.
ಸದರಿ ಪ್ರಸ್ತಾವನೆಯನ್ನು ವನಮಿತ್ರ ಪ್ರತಿಷ್ಠಾನ, ಹೊಸೂರು ಅಧ್ಯಕ್ಷರಾದ ಡಾ. ಸಮದ್ ಕೊಟ್ಟೂರು ಅವರು, ವನ್ಯಜೀವಿ ಸಂರಕ್ಷಣಾ ಆಸಕ್ತರಾದ ಡಾ. ಎಸ್. ಕೆ. ಅರುಣ್ ಮತ್ತು ಶ್ರೀ ಪನಮೇಶುಲು ಹೆಚ್ ಅವರೊಂದಿಗೆ ಸಲ್ಲಿಸಿದರು. ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972ರ ಕಲಂ 36ಎ ಅಡಿಯಲ್ಲಿ ದರೋಜಿ ಕೆರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಿಸುವಂತೆ ಈ ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ. 2023 ರಿಂದ 2026ರವರೆಗೆ ಮೂರು ವರ್ಷಗಳ ಕಾಲ ನಡೆಸಲಾದ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಸಿದ್ಧಪಡಿಸಲಾದ ಈ ವರದಿಯಲ್ಲಿ ದರೋಜಿ ಕೆರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಅಪಾರ ಪರಿಸರ ಮಹತ್ವವನ್ನು ದಾಖಲಿಸಲಾಗಿದೆ. ಅಧ್ಯಯನದ ವೇಳೆ ಒಟ್ಟು 162 ಸ್ಥಳೀಯ ಹಾಗೂ ವಲಸೆ ಹಕ್ಕಿಗಳ ಪ್ರಭೇದಗಳು ದಾಖಲಾಗಿದ್ದು, ಅವುಗಳಲ್ಲಿ ಅನೇಕ ವಲಸೆ ಪಕ್ಷಿಗಳು ಹಾಗೂ ಜಾಗತಿಕ ಮಟ್ಟದಲ್ಲಿ ಸಂರಕ್ಷಣಾ ಸ್ಥಾನಮಾನವನ್ನು ಹೊಂದಿವೆ.
ದಕ್ಕಣ ಪ್ರಸ್ಥಭೂಮಿಯ ವಿಶಿಷ್ಟ ಕಲ್ಲು ಬಂಡೆಯ ಬೆಟ್ಟ ಗುಡ್ಡಗಳು ಮತ್ತು ಅರೆ-ಶುಷ್ಕ ಪರಿಸರದ ನಡುವೆ ಇರುವ ದರೋಜಿ ಕೆರೆಯು ವಿಶ್ವಪ್ರಸಿದ್ಧ ದರೋಜಿ ಕರಡಿಧಾಮದ ಪಕ್ಕದಲ್ಲೇ ಇದೆ. ಈ ಕೆರೆಯು ಸುಮಾರು 3,222 ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದು, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ರೈತ ಕುಟುಂಬಗಳ ಜೀವನಾಧಾರವಾಗಿದೆ. ಜೊತೆಗೆ ಈ ಜಲಾಶಯವು ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು, ಉಭಯವಾಸಿಗಳು ಹಾಗೂ ಇತರೆ ವನ್ಯಜೀವಿಗಳಿಗೆ ಪ್ರಮುಖ ಆವಾಸಸ್ಥಳವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಅಧ್ಯಯನದ ಪ್ರಕಾರ ದರೋಜಿ ಕೆರೆಯು ವರ್ಷಪೂರ್ತಿ ಪಕ್ಷಿಗಳಿಗೆ ಆಹಾರ, ನೀರು, ಆಶ್ರಯ ನೀಡಿ, ಗೂಡು ನಿರ್ಮಾಣ ಹಾಗೂ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣ ಒದಗಿಸುತ್ತದೆ. ಚಳಿಗಾಲದಲ್ಲಿ ವಲಸೆ ಪಕ್ಷಿಗಳು ಯೂರೋಪ್, ಉತ್ತರ ಏಷಿಯಾ, ಸೈಬೀರಿಯಾ, ಮುಂಗೋಲಿಯಾ ಹಾಗೂ ಆಸ್ಟ್ರೇಲಿಯಾದಿಂದ ಇಲ್ಲಿ ಆಗಮಿಸುತ್ತವೆ. ಮಳೆಗಾಲ ಮತ್ತು ಬೇಸಿಗೆಯಲ್ಲಿಯೂ ವಿವಿಧ ಪಕ್ಷಿ ಪ್ರಭೇದಗಳು ಇಲ್ಲಿ ಸಂತಾನೋತ್ಪತ್ತಿ ನಡೆಸುತ್ತಿರುವುದು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ದರೋಜಿ ಕೆರೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ‘ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ’ವಾಗಿ ಘೋಷಿಸುವುದು ಅತ್ಯಗತ್ಯ ಎಂದು ಪ್ರಸ್ತಾವನೆಯಲ್ಲಿ ಶಿಫಾರಸು ಮಾಡಲಾಗಿದೆ. ಇದರಿಂದಾಗಿ, ಪಕ್ಷಿಗಳ ಆವಾಸಸ್ಥಳಗಳ ರಕ್ಷಣೆ ಮತ್ತು ಅಭಿವೃದ್ಧಿ, ಗೂಡು ನಿರ್ಮಾಣಕ್ಕೆ ಪೂರಕ ವಾತಾವರಣ ಹಾಗೂ ಅವುಗಳ ವಿಶ್ರಾಂತಿಗಾಗಿ ಕೃತಕ ದ್ವೀಪಗಳ ನಿರ್ಮಾಣ ಸ್ಥಳೀಯ ಜಾತಿಯ ಮರಗಳ ನೆಡುವಿಕೆ ಹಾಗೂ ಪರಿಸರ ಪುನಶ್ಚೇತನ ಅಕ್ರಮ ಬೇಟೆ ಮತ್ತು ಅತಿಕ್ರಮಣಗಳ ತಡೆ, ಜಲಮಾಲಿನ್ಯ ನಿವಾರಣೆ, ಪಕ್ಷಿ ವೀಕ್ಷಣಾ ಗೋಪುರಗಳು ಹಾಗೂ ಪ್ರಕೃತಿ ವ್ಯಾಖ್ಯಾನ ಕೇಂದ್ರಗಳ ಸ್ಥಾಪನೆ, ಪರಿಸರ ಶಿಕ್ಷಣ ಮತ್ತು ಜನಜಾಗೃತಿ ಕಾರ್ಯಕ್ರಮಗಳು ವಾರ್ಷಿಕ ಪಕ್ಷಿ ಉತ್ಸವಗಳ ಆಯೋಜನೆ, ವೈಜ್ಞಾನಿಕ ಸಂಶೋಧನೆ ಮತ್ತು ದಾಖಲಾತಿ ಕಾರ್ಯಗಳ ಉತ್ತೇಜನ, ಸಮುದಾಯ ಆಧಾರಿತ ಸಂರಕ್ಷಣಾ ಕಾರ್ಯಕ್ರಮಗಳ ಅನುಷ್ಠಾನ, ಜವಾಬ್ದಾರಿಯುತ ಪರಿಸರ ಸ್ನೇಹಿ ಪ್ರವಾಸೋದ್ಯಮದ ಅಭಿವೃದ್ಧಿ ಮುಂತಾದ ಕ್ರಮಗಳನ್ನು ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಮದ್ ಕೊಟ್ಟೂರು ಅವರು ಮಾತನಾಡಿ, ದರೋಜಿ ಕೆರೆಯು ಉತ್ತರ ಕರ್ನಾಟಕದ ಅತ್ಯಂತ ಪ್ರಮುಖ ಪಕ್ಷಿ ಆವಾಸ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಜೀವವೈವಿಧ್ಯ, ವಲಸೆ ಪಕ್ಷಿಗಳ ಸಮೃದ್ಧಿ ಹಾಗೂ ಪರಿಸರ ಮಹತ್ವವನ್ನು ಗಮನಿಸಿದರೆ, ಇದನ್ನು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಿಸುವುದು ಕಾಲದ ಅಗತ್ಯವಾಗಿದೆ. ಈ ಕ್ರಮದಿಂದ ಪಕ್ಷಿಗಳಷ್ಟೇ ಅಲ್ಲದೆ ಸಂಪೂರ್ಣ ಜಲಾವೃತ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ. ಜೊತೆಗೆ ಪರಿಸರ ಶಿಕ್ಷಣ, ಸಂಶೋಧನೆ ಹಾಗೂ ಸುಸ್ಥಿರ ಪ್ರಕೃತಿ ಪ್ರವಾಸೋದ್ಯಮಕ್ಕೂ ಹೊಸ ಅವಕಾಶಗಳು ದೊರೆಯಲಿವೆ, ಎಂದು ಹೇಳಿದರು. ಈ ಪ್ರಸ್ತಾವನೆಯು ಬಳ್ಳಾರಿ ಜಿಲ್ಲೆಯ ಪರಿಸರ ಪರಂಪರೆ ಮತ್ತು ಜೀವವೈವಿಧ್ಯ ಸಂರಕ್ಷಣೆಯ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಕರ್ನಾಟಕದಲ್ಲಿ ಪಕ್ಷಿ ಸಂರಕ್ಷಣೆಗೆ ಹೊಸ ಮೈಲಿಗಲ್ಲಾಗುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್