
ಬೆಂಗಳೂರು, 11 ಜೂನ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ತ್ಯಾಜ್ಯ ನಿರ್ವಹಣಾ ಗುತ್ತಿಗೆ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, “ಜನರ ಹಣ ಲೂಟಿ ಮಾಡಲು ಚಿನ್ನದ ಗಣಿಗೇ ಕೈ ಹಾಕಬೇಕಾಗಿಲ್ಲ, ಕಸದಿಂದಲೂ ಲೂಟಿ ಮಾಡುವ ಕಲೆ ನಮಗೆ ಸಿದ್ಧಿಸಿದೆ ಎಂಬುದನ್ನು ಕಾಂಗ್ರೆಸ್ ಸರ್ಕಾರ ಸಾಬೀತುಪಡಿಸಿದೆ” ಎಂದು ಆರೋಪಿಸಿದ್ದಾರೆ.
ಬೆಂಗಳೂರು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ 39 ಸಾವಿರ ಕೋಟಿ ರೂಪಾಯಿಗಳ ಹಗರಣವನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಬಹಿರಂಗಪಡಿಸಿದ್ದಾರೆ ಎಂದು ಹೇಳಿದ ವಿಜಯೇಂದ್ರ, ಈ ಸಂಬಂಧ ಬಿಜೆಪಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ, ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಲಾಗುತ್ತಿರುವ ದೆಹಲಿ ಮೂಲದ ಸಂಸ್ಥೆಯೊಂದಕ್ಕೆ 35 ವರ್ಷಗಳ ದೀರ್ಘಾವಧಿಯ ಗುತ್ತಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕೆಲ ಸಚಿವರ ವಿರೋಧದ ನಡುವೆಯೂ ಈ ಗುತ್ತಿಗೆ ನೀಡಲಾಗಿದ್ದು, ಇದರ ಹಿಂದೆ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ವಿಜಯೇಂದ್ರ ದೂರಿದ್ದಾರೆ.
ಬೆಂಗಳೂರು ಅಭಿವೃದ್ಧಿ ಮತ್ತು ನಗರ ಸ್ವಚ್ಛತೆಯ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಗುತ್ತಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ.
ತ್ಯಾಜ್ಯ ವಿಲೇವಾರಿ ಗುತ್ತಿಗೆಯನ್ನು ಕೂಡಲೇ ರದ್ದುಪಡಿಸಿ, ಸಂಪೂರ್ಣ ಪಾರದರ್ಶಕತೆಯೊಂದಿಗೆ ಹೊಸ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಾಗಾಗದಿದ್ದರೆ ಬಿಜೆಪಿ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿರುವ ವಿಜಯೇಂದ್ರ, ಈ ವಿಷಯದಲ್ಲಿ ಬೆಂಗಳೂರಿನ ಜನತೆ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.