
ಬಾಗಲಕೋಟೆ, 11 ಜೂನ್ (ಹಿ.ಸ.) :
ಆಂಕರ್ : ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯಲ್ಲಿ ಹಾಲಿ ವಿಧಾನಪರಿಷತ್ ಸದಸ್ಯೆ, ಮಾಜಿ ಸಚಿವೆ ಹಾಗೂ ತೇರದಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಡಾ. ಶ್ರೀಮತಿ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಮಹಾಲಿಂಗಪುರ ನಗರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ
ನಗರದ ಜೆಎಲ್ಬಿಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಡಾ. ಉಮಾಶ್ರೀ ಅವರು ಪಕ್ಷಕ್ಕೆ ಹಾಗೂ ರಾಜ್ಯಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಮಾಡಿದರು.
ಹಿಂದುಳಿದ ವರ್ಗದ ಪ್ರತಿನಿಧಿಯಾಗಿ, ಮಹಿಳಾ ನಾಯಕಿಯಾಗಿ ಹಾಗೂ ನೇಕಾರ ಸಮುದಾಯದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿರುವ ಡಾ. ಉಮಾಶ್ರೀ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸೂಕ್ತ ನಿರ್ಧಾರವಾಗಲಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
2013ರಿಂದ 2018ರವರೆಗೆ ರಾಜ್ಯ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದ ಡಾ. ಉಮಾಶ್ರೀ ಅವರು ತಮ್ಮ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು.
ಅವರ ಆಡಳಿತ ವೈಖರಿ ಹಾಗೂ ಕಾರ್ಯಕ್ಷಮತೆಗೆ ರಾಷ್ಟ್ರಮಟ್ಟದಲ್ಲಿ ಎರಡು ಬಾರಿ ಪ್ರಶಸ್ತಿಗಳು ದೊರೆತಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದು ಮುಖಂಡರು ಹೇಳಿದರು.
ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು ₹2,200 ಕೋಟಿ ಅನುದಾನವನ್ನು ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಸ್ತೆ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದರು ಎಂದು ಅವರು ಸ್ಮರಿಸಿದರು.
ಕಳಂಕರಹಿತ ರಾಜಕಾರಣಿ, ಅನುಭವಿ ನಾಯಕಿ ಹಾಗೂ ಜನಪರ ಆಡಳಿತ ನೀಡಿದ ಡಾ. ಶ್ರೀಮತಿ ಉಮಾಶ್ರೀ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಪಕ್ಷಕ್ಕೂ ಹಾಗೂ ಸರ್ಕಾರಕ್ಕೂ ಹೆಚ್ಚಿನ ಬಲ ಬರಲಿದೆ ಎಂಬುದು ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಒಮ್ಮತದ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪುರಸಭೆ ಅಧ್ಯಕ್ಷರು, ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande