
ನವದೆಹಲಿ, 11 ಜೂನ್ (ಹಿ.ಸ.) :
ಆ್ಯಂಕರ್ : ಸೈಬರ್ ವಂಚನೆ ಪ್ರಕರಣದಲ್ಲಿ ಬೇಕಾಗಿದ್ದ ಪರಾರಿಯಾಗಿದ್ದ ಆರೋಪಿತ ಗಣೇಶ್ ಬಾಲಾಸೋ ಕಾಳೆಯನ್ನು ಥೈಲ್ಯಾಂಡ್ ನಿಂದ ಭಾರತಕ್ಕೆ ಕರೆ ತರುವಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಯಶಸ್ವಿಯಾಗಿದೆ.
ಮೇ 24ರಂದು ಬ್ಯಾಂಕಾಕ್ ಲ್ಲಿ ಥೈಲ್ಯಾಂಡ್ ಅಧಿಕಾರಿಗಳಿಂದ ಬಂಧಿಸಲಾಗಿದ್ದ ಆರೋಪಿಯನ್ನು ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಜೂನ್ 10ರಂದು ಭಾರತಕ್ಕೆ ಕಳುಹಿಸಲಾಗಿದ್ದು, ಸಿಬಿಐ ಅಧಿಕಾರಿಗಳು ಗುರುವಾರ ಆತನನ್ನು ಮುಂಬೈಗೆ ಕರೆತಂದಿದ್ದಾರೆ.
ಸಿಬಿಐ ನೀಡಿರುವ ಮಾಹಿತಿಯ ಪ್ರಕಾರ, ಮುಂಬೈ ತಲುಪಿದ ಬಳಿಕ ಗಣೇಶ್ ಬಾಲಾಸೋ ಕಾಳೆಯನ್ನು ಮಹಾರಾಷ್ಟ್ರ ರಾಜ್ಯ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.
ಆರೋಪಿತನು ಆನ್ಲೈನ್ ನಲ್ಲಿ ಅರೆಕಾಲಿಕ ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ ಜನರಿಂದ ಹೂಡಿಕೆ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ತನಿಖೆಯಲ್ಲಿ, ಆತ ಅಮಾಯಕ ವ್ಯಕ್ತಿಗಳನ್ನು ತನ್ನ ಜಾಲಕ್ಕೆ ಸೆಳೆದು ಅವರ ಬ್ಯಾಂಕ್ ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸುತ್ತಿದ್ದ ಸೈಬರ್ ವಂಚನೆ ಜಾಲವನ್ನು ನಡೆಸುತ್ತಿದ್ದನೆಂಬುದು ಬೆಳಕಿಗೆ ಬಂದಿದೆ.
ಇದಲ್ಲದೆ, ತನ್ನ ಸಹ ಆರೋಪಿತರಿಗೆ ಮೊಬೈಲ್ ಫೋನ್ ಗಳು ಹಾಗೂ ನಕಲಿ ಸಿಮ್ ಕಾರ್ಡ್ ಗಳ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾನೆ ಎಂಬ ಆರೋಪವೂ ಇದೆ.
ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಆರೋಪಿತನ ವಿರುದ್ಧ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಬಿಐ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಸಚಿವಾಲಯ ಹಾಗೂ ಥೈಲ್ಯಾಂಡ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಕಾರದೊಂದಿಗೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಆರೋಪಿತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾದ ಕೇವಲ 20 ದಿನಗಳೊಳಗೆ ಆತನನ್ನು ಪತ್ತೆ ಹಚ್ಚಿ ಭಾರತಕ್ಕೆ ಕರೆತರಲಾಗಿದೆ ಎಂದು ಸಿಬಿಐ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.