
ನವದೆಹಲಿ, 11 ಜೂನ್ (ಹಿ.ಸ.) :
ಆ್ಯಂಕರ್ : ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಗುರುವಾರ ಮತ್ತೊಂದು ರಾಜಕೀಯ ಆಘಾತ ಎದುರಾಗಿದೆ. ಪಕ್ಷದ ರಾಜ್ಯ ಸಭಾ ಸದಸ್ಯ ಪ್ರಕಾಶ್ ಚಿಕ್ ಬಡಾಯಿಕ್ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಸಭಾ ಕಾರ್ಯದರ್ಶಿಗೆ ಸಲ್ಲಿಸಿ, ಅದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ, “ನಾನು ರಾಜ್ಯ ಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಬೇಕು. ನನ್ನ ಅವಧಿಯಲ್ಲಿ ನೀಡಿದ ಸಹಕಾರ ಮತ್ತು ನೆರವಿಗಾಗಿ ಉಪಸಭಾಪತಿ ಹಾಗೂ ರಾಜ್ಯ ಸಭಾ ಕಾರ್ಯಾಲಯದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಉಲ್ಲೇಖಿಸಿದ್ದಾರೆ.
ಆದರೆ, ರಾಜೀನಾಮೆಗೆ ಕಾರಣವೇನು ಎಂಬುದನ್ನು ಅವರು ಪತ್ರದಲ್ಲಿ ಸ್ಪಷ್ಟಪಡಿಸಿಲ್ಲ. ಇದೀಗ ರಾಜ್ಯ ಸಭಾ ಕಾರ್ಯಾಲಯ ಅಗತ್ಯ ಸಂವಿಧಾನಾತ್ಮಕ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ರಾಜೀನಾಮೆ ಅಂಗೀಕಾರದ ಕುರಿತು ನಿರ್ಧಾರ ಕೈಗೊಳ್ಳಲಿದೆ.
ಇತ್ತೀಚಿನ ದಿನಗಳಲ್ಲಿ ತೃಣಮೂಲ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು ಪಕ್ಷ ಹಾಗೂ ಸಂಸದೀಯ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದು ಗಮನಾರ್ಹವಾಗಿದೆ. ಇದಕ್ಕೂ ಮೊದಲು ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯ ಸಭಾ ಸದಸ್ಯರಾಗಿದ್ದ ಸುಷ್ಮಿತಾ ದೇವ್ ಹಾಗೂ ಸುಖೇಂದು ಶೇಖರ್ ರಾಯ್ ಕೂಡ ತಮ್ಮ ಸದಸ್ಯತ್ವ ಹಾಗೂ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.
ಪ್ರಕಾಶ್ ಚಿಕ್ ಬಡಾಯಿಕ್ ಅವರ ರಾಜೀನಾಮೆಯ ಬಳಿಕ ರಾಜ್ಯ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರ ಸಂಖ್ಯೆ 10ಕ್ಕೆ ಇಳಿದಿದೆ. ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಏನಿರಬಹುದು ಎಂಬ ಕುತೂಹಲವೂ ಮೂಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.