ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ-ಪುನರ್ ನಿರ್ಮಾಣ ಕಾಮಗಾರಿಗಳ ಪ್ರಗತಿ ಪರಿಶೀಲನೆ
ಬಾಗಲಕೋಟೆ, 10 ಜೂನ್ (ಹಿ.ಸ.) : ಆಂಕರ್ : ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ವ್ಯಾಪ್ತಿಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಆರ್ & ಆರ್) ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಂಬಂಧ ಮಹತ್ವದ ಸಭೆಯು ಬಾಗಲಕೋಟೆ ನಗರದ ಕಛೇರಿಯಲ್ಲಿ ಬುಧವಾರ ನಡೆಯಿತು. ಯೋಜನೆಯ ವಿವಿಧ ಹಂತಗಳ ಅನುಷ್ಠಾನ, ಪುನರ್ವಸ
Sabhe


ಬಾಗಲಕೋಟೆ, 10 ಜೂನ್ (ಹಿ.ಸ.) :

ಆಂಕರ್ : ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ವ್ಯಾಪ್ತಿಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಆರ್ & ಆರ್) ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಂಬಂಧ ಮಹತ್ವದ ಸಭೆಯು ಬಾಗಲಕೋಟೆ ನಗರದ ಕಛೇರಿಯಲ್ಲಿ ಬುಧವಾರ ನಡೆಯಿತು.

ಯೋಜನೆಯ ವಿವಿಧ ಹಂತಗಳ ಅನುಷ್ಠಾನ, ಪುನರ್ವಸತಿ ಕಾರ್ಯಗಳ ಪ್ರಗತಿ ಹಾಗೂ ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ಚರ್ಚಿಸಲಾಯಿತು.

ಮಾನ್ಯ ಮಹಾ ವ್ಯವಸ್ಥಾಪಕರು (ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಕೃಷ್ಣಾ ಮೇಲ್ದಂಡೆ ಯೋಜನೆ) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪ ಮಹಾವ್ಯವಸ್ಥಾಪಕರು (ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ), ವಿಶೇಷ ಜಿಲ್ಲಾಧಿಕಾರಿಗಳು (ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ) ಜಮಖಂಡಿ ಹಾಗೂ ವಿಶೇಷ ಜಿಲ್ಲಾಧಿಕಾರಿಗಳು (ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ) ಬಾಗಲಕೋಟೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಸ್ಥಳಾಂತರಗೊಂಡ ಕುಟುಂಬಗಳಿಗೆ ಕಲ್ಪಿಸಲಾಗುತ್ತಿರುವ ಪುನರ್ವಸತಿ ಸೌಲಭ್ಯಗಳು, ನಿವೇಶನ ಹಂಚಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪರಿಹಾರ ವಿತರಣೆ, ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ ಹಾಗೂ ಆರೋಗ್ಯ ಸೇವೆಗಳ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಲಾಯಿತು.

ಯೋಜನೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನ, ಪರಿಹಾರ ವಿತರಣೆ ಮತ್ತು ಪುನರ್ವಸತಿ ಕಾಮಗಾರಿಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ಸವಾಲುಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ, ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸಭೆಯ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳನ್ನು ಇನ್ನಷ್ಟು ಉತ್ತಮಗೊಳಿಸುವುದು, ಫಲಾನುಭವಿಗಳ ಅಹವಾಲುಗಳಿಗೆ ತ್ವರಿತ ಸ್ಪಂದನೆ ನೀಡುವುದು ಹಾಗೂ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಎಲ್ಲ ಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಒತ್ತಿ ಹೇಳಲಾಯಿತು. ಯೋಜನೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಯಿತು.

ಕೃಷ್ಣಾ ಮೇಲ್ದಂಡೆ ಯೋಜನೆಯು ಉತ್ತರ ಕರ್ನಾಟಕದ ನೀರಾವರಿ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಯೋಜನೆಯಿಂದ ಪ್ರಭಾವಿತಗೊಂಡ ಕುಟುಂಬಗಳ ಪುನರ್ವಸತಿ ಕಾರ್ಯಗಳನ್ನು ಮಾನವೀಯತೆ ಮತ್ತು ಪಾರದರ್ಶಕತೆಯಿಂದ ಜಾರಿಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಅಭಿಪ್ರಾಯಪಟ್ಟರು.

ಸಭೆಯು ಯೋಜನೆಯ ಪ್ರಗತಿಗೆ ಹೊಸ ಚೈತನ್ಯ ನೀಡುವಂತಾಗಿದ್ದು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗಳನ್ನು ಇನ್ನಷ್ಟು ವೇಗಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳು ಕೈಗೊಳ್ಳಲಾಯಿತು. ವಿವಿಧ ವಿಭಾಗಗಳ ಅಧಿಕಾರಿಗಳು ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಅಗತ್ಯ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande