ಬೆಂಗಳೂರು ಕಸದ ಟೆಂಡರ್ ; ಸಾವಿರಾರು ಕೋಟಿ ಹಗರಣ : ಅಶೋಕ್
ಬೆಂಗಳೂರು, 10 ಜೂನ್ (ಹಿ.ಸ.) : ಆ್ಯಂಕರ್ : ರಾಜಧಾನಿ ಬೆಂಗಳೂರಿನ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಸದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಪ್ರಕರಣವನ್ನು ಕೇಂದ್ರ ತನಿಖಾ ದಳದ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದೆ. ವಿಧಾನ ಸೌಧದಲ್ಲಿ ಬ
Ashok


ಬೆಂಗಳೂರು, 10 ಜೂನ್ (ಹಿ.ಸ.) :

ಆ್ಯಂಕರ್ : ರಾಜಧಾನಿ ಬೆಂಗಳೂರಿನ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಸದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಪ್ರಕರಣವನ್ನು ಕೇಂದ್ರ ತನಿಖಾ ದಳದ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದೆ.

ವಿಧಾನ ಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಬೆಂಗಳೂರು ಜನತೆ ಬೆಚ್ಚಿಬೀಳುವಂತಹ ಅಕ್ರಮ ನಡೆದಿದೆ. ಕಸದ ಟೆಂಡರ್ ಹೆಸರಿನಲ್ಲಿ ಸುಮಾರು ₹36 ಸಾವಿರ ಕೋಟಿ ಮೊತ್ತದ ಲೂಟಿ ನಡೆದಿದೆ. ದೇಶದ ಇತಿಹಾಸದಲ್ಲೇ ಕಸದ ಟೆಂಡರ್ ವಿಚಾರದಲ್ಲಿ ಇಷ್ಟೊಂದು ದೊಡ್ಡ ಹಗರಣ ನಡೆದಿರುವ ಉದಾಹರಣೆ ಇಲ್ಲ ಎಂದು ಆರೋಪಿಸಿದರು.

ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ವಲಯಗಳ ಕಸ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ಯಾಕೇಜ್ಗಳ ಟೆಂಡರ್ ಅನ್ನು ದೆಹಲಿ ಮೂಲದ ರಾಮ್ಕಿ ಸಂಸ್ಥೆಗೆ ನೀಡಲಾಗಿದೆ. ಈ ಟೆಂಡರ್ ಅನ್ನು 30 ವರ್ಷಗಳ ಅವಧಿಗೆ ನೀಡಲಾಗಿದ್ದು, ಬಳಿಕ ಮತ್ತಷ್ಟು 35 ವರ್ಷಗಳ ಕಾಲ ವಿಸ್ತರಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಕಸದ ನಿರ್ವಹಣೆಯಂತಹ ಕಾರ್ಯಕ್ಕೆ ಇಷ್ಟೊಂದು ದೀರ್ಘಾವಧಿಯ ಗುತ್ತಿಗೆ ನೀಡಿರುವುದು ಅಭೂತಪೂರ್ವ ಬೆಳವಣಿಗೆಯಾಗಿದೆ ಎಂದು ಅವರು ಟೀಕಿಸಿದರು.

ಒಟ್ಟು ₹36 ಸಾವಿರ ಕೋಟಿ ಮೊತ್ತದ ಟೆಂಡರ್ನಲ್ಲಿ ಸುಮಾರು ₹10 ಸಾವಿರ ಕೋಟಿ ಕಿಕ್ಬ್ಯಾಕ್ ವ್ಯವಹಾರ ನಡೆದಿದೆ ಎಂದು ಆರೋಪಿಸಿದ ಅಶೋಕ್, ಈ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದರು.

ರಾಮ್ಕಿ ಸಂಸ್ಥೆಯನ್ನು ವಿಶ್ವ ಬ್ಯಾಂಕ್, ಕೆಲವು ರಾಜ್ಯ ಸರ್ಕಾರಗಳು ಹಾಗೂ ಹಿಂದಿನ ಬಿಬಿಎಂಪಿ ಕಪ್ಪುಪಟ್ಟಿಗೆ ಸೇರಿಸಿದ್ದರೂ, ಅದೇ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 22ರಂದು ನಡೆದ ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಈ ಟೆಂಡರ್ಗೆ ಅನುಮೋದನೆ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಟೆಂಡರ್ನ ವೆಚ್ಚ ಮತ್ತು ಷರತ್ತುಗಳ ಬಗ್ಗೆ ಸಚಿವ ಸಂಪುಟದ ಸದಸ್ಯರಲ್ಲಿಯೇ ಆತಂಕ ವ್ಯಕ್ತವಾಗಿತ್ತು. ಆರ್ಥಿಕ ಇಲಾಖೆಯೂ ಹಲವು ಆಕ್ಷೇಪಣೆಗಳನ್ನು ದಾಖಲಿಸಿತ್ತು. ಕಸದ ಟೆಂಡರ್ ಪರಿಶೀಲನೆಗಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಚಿಸಲಾಗಿದ್ದ ಸಚಿವ ಸಂಪುಟ ಉಪಸಮಿತಿಯನ್ನು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ರದ್ದುಪಡಿಸಿ, ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ತಮ್ಮ ಅನುಕೂಲಕ್ಕೆ ತಕ್ಕ ವರದಿ ಪಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಪ್ರಕರಣದ ಸಮಗ್ರ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿರುವ ಅವರು, ಈ ಸಂಬಂಧ ರಾಜ್ಯಪಾಲರು ಹಾಗೂ ಲೋಕಾಯುಕ್ತರಿಗೆ ಈಗಾಗಲೇ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಕಸದ ಟೆಂಡರ್ ಪ್ರಕ್ರಿಯೆಯ ಸಂಪೂರ್ಣ ವಿವರವನ್ನು ಸಾರ್ವಜನಿಕರ ಮುಂದಿಡಬೇಕು ಹಾಗೂ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande