
ಕೋಲಾರ, ಜೂನ್ ೧೦ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲೆಯಲ್ಲಿ ಲಭ್ಯವಿರುವ ಜೀವವೈವಿಧ್ಯತೆ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಪಶ್ಚಿಮ ಘಟ್ಟಗಳ ಮಾದರಿಯಲ್ಲಿ ಉಳಿಸಿ, ಬೆಳೆಸಿ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಆಶಾದಾಯಕ ಹೆಜ್ಜೆಯನ್ನಿಟ್ಟಿದೆ. ಈ ಕುರಿತು ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಿತಿ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ತಬ್ರೇಜ್ ಆಲಂ ಷರೀಪ್ ಅವರು ಇಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ವಿಸ್ತೃತ ಚರ್ಚೆ ನಡೆಸಿದರು.
ಜಿಲ್ಲೆಯಲ್ಲಿರುವ ಜೀವವೈವಿಧ್ಯತೆಯ ಕೇಂದ್ರಗಳನ್ನು ಕೇವಲ ವೀಕ್ಷಣೆಗಷ್ಟೇ ಸೀಮಿತಗೊಳಿಸದೆ, ಅವುಗಳನ್ನು ‘ಅನುಭವ ಕೇಂದ್ರ’ಗಳನ್ನಾಗಿ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸುವ ಕುರಿತು ಸಭೆಯಲ್ಲಿ ಚಿಂತಿಸಲಾಯಿತು.
ಈ ವಿನೂತನ ಯೋಜನೆಯ ಮೂಲಕ ಪರಿಸರ ಅಧ್ಯಯನ ಆಸಕ್ತರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಜನತೆಗೆ ಜೀವವೈವಿಧ್ಯತೆಯ ಕುರಿತು ನೈಜ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಒದಗಿಸಲು ಹಾಗೂ ಜಾಗೃತಿ ಮೂಡಿಸಲು ಸಾಧ್ಯವಾಗಲಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡುಬರುವ ದಟ್ಟವಾದ ಕಾಡುಗಳು, ನದಿ ಮೂಲಗಳು, ಶೋಲಾ ಹುಲ್ಲುಗಾವಲುಗಳು ಹಾಗೂ ಅಪರೂಪದ ಪ್ರಾಣಿ-ಪಕ್ಷಿ ಸಂಕುಲವನ್ನು ಒಳಗೊಂಡ ಜಾಗತಿಕ ಜೀವವೈವಿಧ್ಯತೆಯ ಮಾದರಿಯೇ ಈ ಯೋಜನೆಗೆ ಪ್ರೇರಣೆಯಾಗಿದೆ. ಅದೇ ರೀತಿಯಲ್ಲಿ, ಕೋಲಾರ ಜಿಲ್ಲೆಯ ಭೌಗೋಳಿಕತೆಗೆ ತಕ್ಕಂತೆ ಲಭ್ಯವಿರುವ ಸ್ಥಳೀಯ ಸಸ್ಯ, ಪ್ರಾಣಿ ಪ್ರಭೇದಗಳು ಹಾಗೂ ಪ್ರಾಕೃತಿಕ ನೆಲೆಗಳನ್ನು ಗುರುತಿಸಿ, ಮುಂದಿನ ಪೀಳಿಗೆಗಾಗಿ ಕಾಯ್ದಿರಿಸುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ.
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಕಾರ್ಯಚಟುವಟಿಕೆಗಳು ಹಾಗೂ ಪರಿಸರ ಸಂರಕ್ಷಣೆಯ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಅಧಿಕೃತ ವೆಬ್ಸೈಟ್ ತಿತಿತಿ.ತಿgಛಿಣಜಿ.ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ವಿಜ್ಞಾನಿ ನಹೀಮ್ ಉಲ್ಲಾ ಯೋಜನಾ ನಿರ್ದೇಶಕರು ಅಂಬಿಕಾ, ಅರಣ್ಯ ಸಂರಕ್ಷಣಾ ಅಧಿಕಾರಿ ರಘು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್