
ವಿಜಯಪುರ, 10 ಜೂನ್ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ತೋಟದ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಾಶವಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಕೃಷಿ ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು, ನಗದು, ಆಭರಣಗಳು ಸೇರಿದಂತೆ ಮೂರು ಕುರಿಗಳು ಬೆಂಕಿಗಾಹುತಿಯಾಗಿದ್ದು, ಸುಮಾರು ₹12 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಬೂದಿಹಾಳ ಪಿ.ಎಚ್. ಗ್ರಾಮದ ನಿವಾಸಿಯಾದ ರೈತ ಚನ್ನಬಸಪ್ಪ ನೀಲಕಂಠಪ್ಪ ಬಿರಾದಾರ ಅವರ 2 ಎಕರೆ 30 ಗುಂಟೆ ಜಮೀನಿನಲ್ಲಿರುವ ಪತ್ತರೆ ಮನೆಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಇಡೀ ಮನೆಯನ್ನು ಆವರಿಸಿದೆ. ಮನೆಯಲ್ಲಿ ದಾಸ್ತಾನು ಇರಿಸಲಾಗಿದ್ದ ಗೋಧಿ, ಜೋಳ, ಶೇಂಗಾ, ಉಳ್ಳಗಡ್ಡೆ, ಜವಗೋಧಿ, ಅಕ್ಕಿ, ಹತ್ತಿ ಬೀಜ ಸೇರಿದಂತೆ ಕೃಷಿ ಉತ್ಪನ್ನಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಇದಲ್ಲದೆ, ಮನೆಯಲ್ಲಿದ್ದ ಸುಮಾರು ₹75 ಸಾವಿರ ಮೌಲ್ಯದ ಬೆಳ್ಳಿ-ಬಂಗಾರದ ಆಭರಣಗಳು, ಗೃಹೋಪಯೋಗಿ ಸಾಮಗ್ರಿಗಳು, ಬಟ್ಟೆಗಳು ಹಾಗೂ ಅಡುಗೆ ಪರಿಕರಗಳೂ ಬೆಂಕಿಗೆ ಆಹುತಿಯಾಗಿವೆ.
ತೋಟದಲ್ಲಿ ಸಾಕಲಾಗುತ್ತಿದ್ದ ಮೂರು ಕುರಿಗಳು ಸಹ ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿರುವುದು ಕುಟುಂಬದ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಕುಟುಂಬದವರು ಮನೆಯಲ್ಲಿ ಅಡುಗೆ ಮಾಡಿಕೊಂಡು ತೋಟದ ಕೆಲಸದಲ್ಲಿ ತೊಡಗಿದ್ದ ವೇಳೆ ಏಕಾಏಕಿ ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವ್ಯಾಪಿಸುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಸುತ್ತಮುತ್ತಲಿನ ತೋಟದ ಮಾಲೀಕರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಅದು ಸಾಧ್ಯವಾಗಲಿಲ್ಲ. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಘಟನೆಯಿಂದ ತೀವ್ರ ಸಂಕಷ್ಟಕ್ಕೊಳಗಾದ ರೈತನ ಪತ್ನಿ ದೊಡ್ಡಮ್ಮ ಚನ್ನಬಸಪ್ಪ ಬಿರಾದಾರ ಅವರು ಕಣ್ಣೀರಿಟ್ಟು ತಮ್ಮ ನೋವನ್ನು ವ್ಯಕ್ತಪಡಿಸಿದರು. ನಮ್ಮ ಬದುಕಿನ ಆಧಾರವಾಗಿದ್ದ ಮನೆ, ಧಾನ್ಯ, ಬಟ್ಟೆ, ಅಡುಗೆ ಸಾಮಗ್ರಿಗಳು ಸೇರಿದಂತೆ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಈಗ ದಿನನಿತ್ಯದ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಜೀವನಪೂರ್ತಿ ಕಷ್ಟಪಟ್ಟು ಸಂಗ್ರಹಿಸಿದ್ದ ವಸ್ತುಗಳು ಕ್ಷಣಾರ್ಧದಲ್ಲಿ ನಾಶವಾಗಿವೆ ಎಂದು ದುಃಖ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಕುಮಾರಿ ಎಸ್.ಐ. ಮೋರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ವಿವರಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.
ಅಗ್ನಿ ಅವಘಡದಿಂದ ಕುಟುಂಬದ ಬದುಕಿನ ಆಧಾರವೇ ಕಣ್ಮರೆಯಾಗಿದ್ದು, ಸಂತ್ರಸ್ತ ರೈತ ಕುಟುಂಬಕ್ಕೆ ತಕ್ಷಣ ಪರಿಹಾರ ಹಾಗೂ ನೆರವು ಒದಗಿಸಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿ ಬರುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande