ಬ್ರಿಕ್ಸ್ ಕೃಷಿ ಸಮ್ಮೇಳನ : ಇಂದೋರ್ ಸಂಸ್ಕೃತಿಗೆ ಮನಸೋತ ವಿದೇಶಿ ಪ್ರತಿನಿಧಿಗಳು
ನಾನಾ
ರಾಜವಾಡಾ ವಿಕ್ಷೀಸಿದ ವಿದೇಶಿ ಪ್ರತಿನಿಧಿಗಳು


ಇಂದೋರ್, 10 ಜೂನ್ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆಯುತ್ತಿರುವ ಐದು ದಿನಗಳ ಬ್ರಿಕ್ಸ್ ಕೃಷಿ ಸಮ್ಮೇಳನದ ಎರಡನೇ ದಿನ ನಗರದ ಸಾಂಸ್ಕೃತಿಕ ವೈಭವ ಮತ್ತು ಆತಿಥ್ಯದ ವಿಶಿಷ್ಟ ಪರಿಚಯ ವಿದೇಶಿ ಪ್ರತಿನಿಧಿಗಳಿಗೆ ದೊರೆಯಿತು.

ಬ್ರಿಕ್ಸ್ ರಾಷ್ಟ್ರಗಳು ಸೇರಿದಂತೆ 20ಕ್ಕೂ ಹೆಚ್ಚು ದೇಶಗಳ ಕೃಷಿ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕೃಷಿ ತಜ್ಞರು ಐತಿಹಾಸಿಕ ರಾಜವಾಡಾ ಪ್ರದೇಶದಲ್ಲಿ ಹೆರಿಟೇಜ್ ವಾಕ್ ನಡೆಸಿ ನಗರದ ಶ್ರೀಮಂತ ಇತಿಹಾಸವನ್ನು ಸಮೀಪದಿಂದ ಅರಿತುಕೊಂಡರು.

ಬೆಳಿಗ್ಗೆ ನಡೆದ ಈ ಕಾರ್ಯಕ್ರಮದಲ್ಲಿ ಜರ್ಮನಿ, ಇಥಿಯೋಪಿಯಾ, ಇಂಡೋನೇಷ್ಯಾ ಸೇರಿದಂತೆ ನಾನಾ ದೇಶಗಳ ಪ್ರತಿನಿಧಿಗಳು ಭಾಗವಹಿಸಿದರು.

ರಾಜವಾಡಾಗೆ ಆಗಮಿಸಿದ ಅತಿಥಿಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಹೊಳ್ಕರ್ ಅರಮನೆ ಕಾಲದ ದರ್ಬಾರದ ದೃಶ್ಯಾವಳಿ, ಶಾಸ್ತ್ರೀಯ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿನಿಧಿಗಳನ್ನು ಆಕರ್ಷಿಸಿದವು.

ಇತಿಹಾಸಕಾರರು ಮಹಾರಾಣಿ ಅಹಲ್ಯಾಬಾಯಿ ಹೊಳ್ಕರ್ ಅವರ ಆಡಳಿತ ಹಾಗೂ ಮಾಳ್ವಾ ಪ್ರದೇಶದ ಸಾಂಸ್ಕೃತಿಕ ಪರಂಪರೆ ಕುರಿತು ಮಾಹಿತಿ ನೀಡಿದರು.

ಹೆರಿಟೇಜ್ ವಾಕ್ ವೇಳೆ ಪ್ರತಿನಿಧಿಗಳು ಗೋಪಾಲ್ ಮಂದಿರಕ್ಕೂ ಭೇಟಿ ನೀಡಿ ಅಲ್ಲಿನ ಮರದ ಕೆತ್ತನೆಗಳು ಹಾಗೂ ವಾಸ್ತುಶಿಲ್ಪದ ಸೌಂದರ್ಯವನ್ನು ವೀಕ್ಷಿಸಿದರು. ದೇವಾಲಯದ ಐತಿಹಾಸಿಕ ಮಹತ್ವ ಮತ್ತು ಭವ್ಯತೆ ಅವರಿಗೆ ವಿಶೇಷವಾಗಿ ಮೆಚ್ಚುಗೆ ಗಳಿಸಿತು.

ಇಂದೋರ್ ನ ಪ್ರಸಿದ್ಧ ಸಾಂಪ್ರದಾಯಿಕ ಉಪಹಾರವಾದ ಪೋಹಾ-ಜಿಲೇಬಿಯ ರುಚಿಯನ್ನೂ ವಿದೇಶಿ ಅತಿಥಿಗಳು ಸವಿದರು. ಚಹಾ ಮತ್ತು ಕಾಫಿಯೊಂದಿಗೆ ನೀಡಲಾದ ಸ್ಥಳೀಯ ಖಾದ್ಯಗಳನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಾದ ಬಳಿಕ ಪ್ರತಿನಿಧಿಗಳು ಗ್ರಾಮೀಣ ಹಾಟ್ ಗೆ ಭೇಟಿ ನೀಡಿ ಕೃಷಿ ಉತ್ಪನ್ನಗಳು, ಸಾವಯವ ಕೃಷಿ ಪದ್ಧತಿಗಳು ಹಾಗೂ ಗ್ರಾಮೀಣ ಉದ್ಯಮಗಳ ಕಾರ್ಯವೈಖರಿಯನ್ನು ವೀಕ್ಷಿಸಿದರು. ಸ್ಥಳೀಯ ರೈತರು ಮತ್ತು ಉದ್ಯಮಿಗಳ ಉತ್ಪನ್ನಗಳು ವಿದೇಶಿ ಅತಿಥಿಗಳ ಗಮನ ಸೆಳೆದವು.

ಸಮ್ಮೇಳನದ ವಿವಿಧ ಅಧಿವೇಶನಗಳಲ್ಲಿ ಆಹಾರ ಭದ್ರತೆ, ಕೃಷಿ ವ್ಯಾಪಾರ, ಹವಾಮಾನ ಸ್ನೇಹಿ ಕೃಷಿ, ಕೃಷಿ ನವೋದ್ಯಮ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಕ್ಷೇತ್ರಗಳ ಕುರಿತು ಚರ್ಚೆಗಳು ಮುಂದುವರಿದಿವೆ. ಬುಧವಾರ ಜಂಟಿ ಘೋಷಣಾಪತ್ರದ ಕರಡು ಕುರಿತು ಸಮಾಲೋಚನೆ ನಡೆಯಲಿದ್ದು, ಸಂಜೆ ಸದಸ್ಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಭೆಗಳು ನಡೆಯಲಿವೆ.

ಸಮ್ಮೇಳನದ ಮೊದಲ ದಿನ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಕೃಷಿ ವ್ಯಾಪಾರ ವೃದ್ಧಿ, ತಾಂತ್ರಿಕ ಸಹಕಾರ ಬಲಪಡಿಸುವುದು ಹಾಗೂ ಆಹಾರ ಭದ್ರತೆ ಕುರಿತ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಹವಾಮಾನ ಸ್ನೇಹಿ ಕೃಷಿ ಮತ್ತು ಕೃಷಿ ಸಂಶೋಧನಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ.

ಜೂನ್ 9ರಿಂದ 13ರವರೆಗೆ ನಡೆಯುತ್ತಿರುವ ಈ ಸಮ್ಮೇಳನವು ಮಧ್ಯಪ್ರದೇಶಕ್ಕೆ ಕೃಷಿ, ಆಹಾರ ಸಂಸ್ಕರಣೆ ಮತ್ತು ರಫ್ತು ಕ್ಷೇತ್ರಗಳಲ್ಲಿ ಜಾಗತಿಕ ಗುರುತನ್ನು ತಂದುಕೊಡುವುದರ ಜೊತೆಗೆ ಹೊಸ ಹೂಡಿಕೆ ಮತ್ತು ತಾಂತ್ರಿಕ ಸಹಕಾರದ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande