
ಬಾಗಲಕೋಟೆ, 10 ಜೂನ್ (ಹಿ.ಸ.) :
ಆಂಕರ್ : ಟೆಂಗಿನಮಠ-ಟೀಕಿನಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಸಮಾರಂಭವು ಬುಧವಾರ ಬಾಗಲಕೋಟೆ ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಕ್ತಿಭಾವ ಮತ್ತು ಗೌರವದ ವಾತಾವರಣದಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚರಂತಿಮಠದ ಪ್ರಭುಮಹಾಸ್ವಾಮಿಗಳು, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು, ಟೀಕಿನಮಠದ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಬಿಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಪೂಜ್ಯರು ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲರ ಸೇವಾಭಾವ, ಸಮರ್ಪಣೆ ಹಾಗೂ ಸಂಘಟನಾ ಶಕ್ತಿಯನ್ನು ಶ್ಲಾಘಿಸಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸ ಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಹೋತ್ಸವದ ಆಯೋಜನೆ, ನಿರ್ವಹಣೆ, ಅತಿಥಿ ಸತ್ಕಾರ, ಅನ್ನದಾಸೋಹ, ವಸತಿ ವ್ಯವಸ್ಥೆ, ಶಿಸ್ತು ಪಾಲನೆ ಹಾಗೂ ವಿವಿಧ ಸಮಿತಿಗಳ ಕಾರ್ಯಗಳಲ್ಲಿ ಶ್ರಮಿಸಿದ ಭಕ್ತರು, ದಾನಿಗಳು, ಸ್ವಯಂಸೇವಕರು ಮತ್ತು ಸಂಘಟಕರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿ ಅಭಿನಂದಿಸಲಾಯಿತು.
ಮಹೋತ್ಸವದ ಯಶಸ್ಸು ಸಮೂಹ ಶ್ರಮ, ಭಕ್ತಿ ಮತ್ತು ಸಂಘಟನಾ ಸಾಮರ್ಥ್ಯದ ಪ್ರತೀಕವಾಗಿದ್ದು, ಎಲ್ಲರ ಸಹಕಾರದಿಂದಲೇ ಈ ಧಾರ್ಮಿಕ ಮಹೋತ್ಸವವು ಐತಿಹಾಸಿಕವಾಗಿ ಯಶಸ್ವಿಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಟೆಂಗಿನಮಠ ಹಾಗೂ ಟೀಕಿನಮಠದ ಸದ್ಭಕ್ತ ಮಂಡಳಿಯ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕೃತಜ್ಞತಾ ಸಮಾರಂಭವು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ವೇದಿಕೆಯಾಗಿದ್ದು, ಮಹೋತ್ಸವದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಗೌರವ ಸಮರ್ಪಿಸುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande