ಎಸ್ಪಿ ಆಪ್ತನೆಂದು ಹೇಳಿಕೊಂಡು ವಂಚನೆ ; ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗದ ಆಸೆ ತೋರಿಸಿ ₹5.04 ಲಕ್ಷ ದೋಚಿದ ಆರೋಪಿ ಬಂಧನ
ವಿಜಯಪುರ, 10 ಜೂನ್ (ಹಿ.ಸ.) : ಆಂಕರ್ : ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಫೇಸ್ಬುಕ್ ಖಾತೆ ತೆರೆದು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹5 ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದ ಆರೋಪಿಯನ್ನು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎ
ವಂಚನೆ


ವಿಜಯಪುರ, 10 ಜೂನ್ (ಹಿ.ಸ.) :

ಆಂಕರ್ : ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಫೇಸ್ಬುಕ್ ಖಾತೆ ತೆರೆದು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹5 ಲಕ್ಷಕ್ಕೂ ಅಧಿಕ ಹಣ ವಂಚಿಸಿದ್ದ ಆರೋಪಿಯನ್ನು ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಹನುಮಂತ ಭಜಂತ್ರಿ ಎಂಬಾತನಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ ನಕಲಿ ಸಾಮಾಜಿಕ ಜಾಲತಾಣ ಖಾತೆ ಮೂಲಕ ನಿರುದ್ಯೋಗಿಗಳನ್ನು ಗುರಿಯಾಗಿಸಿಕೊಂಡು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸೆಪ್ಟೆಂಬರ್ 24, 2025 ರಂದು ವಿಜಯಪುರ ತಾಲೂಕಿನ ಬಬಲೇಶ್ವರ ಪಟ್ಟಣದ ಸುರೇಶ್ ಅಥಣಿ ಅವರು ದೂರು ದಾಖಲಿಸಿದ್ದರು ಎಂದು ತಿಳಿಸಿದ್ದಾರೆ.

ದೂರಿನ ಪ್ರಕಾರ, ಆರೋಪಿ ಹನುಮಂತ ಭಜಂತ್ರಿ ವಿಜಯಪುರ ಎಸ್ಪಿ ಹೆಸರಿನಲ್ಲಿ ನಕಲಿ ಇ-ಮೇಲ್ ಹಾಗೂ ಫೇಸ್ಬುಕ್ ಖಾತೆ ಸೃಷ್ಟಿಸಿ, ತನ್ನನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಆಪ್ತನೆಂದು ಪರಿಚಯಿಸಿಕೊಂಡಿದ್ದ. ಬಳಿಕ ಲೋಕೋಪಯೋಗಿ ಇಲಾಖೆಯಲ್ಲಿ (PWD) ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಸುರೇಶ್ ಅಥಣಿ ಅವರಿಂದ ಹಂತ ಹಂತವಾಗಿ ₹5,04,600 ಹಣ ಪಡೆದು ವಂಚಿಸಿದ್ದಾನೆ.

ದೂರು ದಾಖಲಾದ ಬಳಿಕ ಸಿಇಎನ್ ಪೊಲೀಸರು ತಾಂತ್ರಿಕ ತನಿಖೆ ಕೈಗೊಂಡು ಸಾಮಾಜಿಕ ಜಾಲತಾಣಗಳ ಡಿಜಿಟಲ್ ಸುಳಿವುಗಳನ್ನು ಆಧರಿಸಿ ಆರೋಪಿಯ ಚಟುವಟಿಕೆಗಳನ್ನು ಪತ್ತೆಹಚ್ಚಿದರು. ತನಿಖೆಯಲ್ಲಿ ನಕಲಿ ಖಾತೆಗಳನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಹಣ ಸಂಗ್ರಹಿಸುತ್ತಿದ್ದ ಜಾಲ ಬೆಳಕಿಗೆ ಬಂದಿದ್ದು, ಕೊನೆಗೆ ಹನುಮಂತ ಭಜಂತ್ರಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಆರೋಪಿ ನಕಲಿ ಖಾತೆ ಸೃಷ್ಟಿಸಿ ವಂಚನೆ ನಡೆಸಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇದೇ ಮಾದರಿಯಲ್ಲಿ ಇನ್ನೂ ಹಲವರಿಂದ ಹಣ ಪಡೆದು ಮೋಸ ಮಾಡಿರುವ ಸಾಧ್ಯತೆಯಿರುವುದರಿಂದ ಪೊಲೀಸರು ತನಿಖೆಯನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಬರುವ ಸಂದೇಶಗಳು, ಉದ್ಯೋಗದ ಭರವಸೆಗಳು ಹಾಗೂ ಹಣದ ಬೇಡಿಕೆಗಳನ್ನು ನಂಬಬಾರದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಸರ್ಕಾರಿ ಉದ್ಯೋಗ ನೇಮಕಾತಿ ಕಾನೂನುಬದ್ಧ ಪ್ರಕ್ರಿಯೆಯ ಮೂಲಕವೇ ನಡೆಯುತ್ತದೆ. ಹಣ ಪಡೆದು ಉದ್ಯೋಗ ಕೊಡಿಸುವುದಾಗಿ ಹೇಳುವವರ ವಿರುದ್ಧ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಸದ್ಯ ಆರೋಪಿಯಿಂದ ವಂಚನೆಗೊಳಗಾದ ಇತರರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಮತ್ತಷ್ಟು ಜನರು ವಂಚನೆಗೆ ಒಳಗಾಗುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande