
ಗದಗ, 10 ಜೂನ್ (ಹಿ.ಸ.) :
ಆ್ಯಂಕರ್ : ಮಾನವನ ಅತಿಯಾದ ದುರಾಸೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿ ವಿನಾಶದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದ್ದು, ಇದರ ದುಷ್ಪರಿಣಾಮವನ್ನು ಇಡೀ ಮಾನವ ಸಮಾಜ ಎದುರಿಸುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಪ್ರಕೃತಿ ಸಮತೋಲನ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕರೆ ನೀಡಿದರು.
ಗದಗ ನಗರದ ತೋಂಟದಾರ್ಯ ಸಂಸ್ಥಾನ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಆಯೋಜಿಸಲಾಗಿದ್ದ 2801ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರೀಕರಣ ಹಾಗೂ ಕೈಗಾರಿಕೀಕರಣದ ಹೆಸರಿನಲ್ಲಿ ಅರಣ್ಯ ಪ್ರದೇಶಗಳನ್ನು ನಾಶ ಮಾಡಲಾಗುತ್ತಿದೆ. ಪ್ರಕೃತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಾದ ಮಾನವನು ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಗತಿಯ ಹೆಸರಿನಲ್ಲಿ ಸಹಜ ಪರಿಸರವನ್ನು ನಾಶಪಡಿಸಿ ಅಸಹಜವಾದ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಮಳೆಯ ಕೊರತೆ, ತಾಪಮಾನ ಏರಿಕೆ, ಜಲಮೂಲಗಳ ಕ್ಷೀಣತೆ ಹಾಗೂ ವಾಯುಮಾಲಿನ್ಯದಂತಹ ಸಮಸ್ಯೆಗಳು ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ನೀರು, ಗಾಳಿ ಮತ್ತು ಆಹಾರದಲ್ಲಿ ವಿಷಕಾರಿ ಅಂಶಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಅನೇಕ ಹೊಸ ರೋಗಗಳು ಜನರನ್ನು ಕಾಡುತ್ತಿವೆ. ಪರಿಸರದ ಸಮತೋಲನ ಕಾಪಾಡುವ ಮೂಲಕ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಅಂತರಾಷ್ಟ್ರೀಯ ಪರಿಸರ ದಿನಾಚರಣೆ’ ಕುರಿತು ಉಪನ್ಯಾಸ ನೀಡಿದ ಪ್ರೊ. ಸಿ. ಎಸ್. ಅರಸನಾಳ ಅವರು, ಪ್ರಕೃತಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಸಮತೋಲನ ಸಾಧಿಸಲು ಕಾಲಕಾಲಕ್ಕೆ ಅನೇಕ ಸಂಕೇತಗಳನ್ನು ನೀಡುತ್ತಲೇ ಇರುತ್ತದೆ. ಆದರೆ ಮಾನವ ಸಮಾಜವು ಆ ಸಂಕೇತಗಳನ್ನು ನಿರ್ಲಕ್ಷಿಸಿ ಸ್ವಾರ್ಥ ಮತ್ತು ದುರಾಸೆಯ ಮಾರ್ಗದಲ್ಲಿ ಸಾಗುತ್ತಿರುವುದು ಪರಿಸರ ಸಂಕಷ್ಟಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಕೃತಿಯ ಮೇಲಿನ ನಿರ್ಲಕ್ಷ್ಯದಿಂದಾಗಿ ಇಂದು ಶುದ್ಧ ಗಾಳಿ, ಕುಡಿಯುವ ನೀರು ಹಾಗೂ ಪೌಷ್ಟಿಕ ಆಹಾರ ದೊರೆಯುವುದು ಸವಾಲಿನ ಸಂಗತಿಯಾಗುತ್ತಿದೆ. ಪರಿಸರ ಮಾಲಿನ್ಯ, ಅರಣ್ಯ ನಾಶ ಹಾಗೂ ಅತಿಯಾದ ಸಂಪನ್ಮೂಲ ಬಳಕೆ ಭವಿಷ್ಯದ ಪೀಳಿಗೆಗೆ ದೊಡ್ಡ ಅಪಾಯವನ್ನು ತಂದೊಡ್ಡುತ್ತಿದೆ. ಪ್ರತಿಯೊಬ್ಬರೂ ತಮ್ಮ ಮನೆ, ಶಾಲೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡಮರಗಳನ್ನು ನೆಟ್ಟು ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಮಾತ್ರ ಪ್ರಕೃತಿ ಸಮತೋಲನ ಮರುಸ್ಥಾಪನೆ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಅಣ್ಣಿಗೇರಿ ತಾಲೂಕಿನ ಶಿಕ್ಷಕ ವಿ. ಎಂ. ಹಿರೇಮಠ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ತಮ್ಮ ಮನೆ, ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಗಿಡಮರಗಳನ್ನು ನೆಟ್ಟು ಅವುಗಳ ಪೋಷಣೆ ಮಾಡುತ್ತಿರುವ ಅವರು ಪರಿಸರ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಲಾಯಿತು. ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಅದೇ ರೀತಿ ಶ್ರೀಮಠದ ಆವರಣವನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಂಡು ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಚೌರಮ್ಮ ಕರಿಗಾರ ಅವರನ್ನು ಗೌರವಿಸಲಾಯಿತು. ನಗರಸಭೆ ಹಾಗೂ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಶ್ರೀಮಠದ ವತಿಯಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ಸಮಾಜದ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಇಂತಹ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮುಂಡರಗಿಯ ಡಾ. ನಿಂಗೂ ಸೊಲಗಿ ಅವರು ಪರಿಸರ ಜಾಗೃತಿ ಮೂಡಿಸುವ ಗೀತೆಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಭೂಮಿಕಾ ಕೆ. ತುಕ್ಕಪ್ಪನವರ ಧರ್ಮಗ್ರಂಥ ಪಠಣ ನೆರವೇರಿಸಿದರೆ, ಬಸವರಾಜ್ ಕೆ. ತುಕ್ಕಪ್ಪನವರ ವಚನ ಚಿಂತನ ಮಂಡಿಸಿದರು. ಮೃತ್ಯುಂಜಯ ಹಾಗೂ ಸುತಾರ ಅವರು ವಚನ ಸಂಗೀತದ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಭಾವದ ಸ್ಪರ್ಶ ನೀಡಿದರು.
ಡಾ. ಉಮೇಶ ವೀ. ಪುರದ ಸ್ವಾಗತಿಸಿದರು. ಶ್ರೀಮತಿ ಸುರೇಖಾ ಪಿಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲೆಯ ತಂಬ್ರಹಳ್ಳಿಯ ಅಕ್ಕಿ ಮಂಜುನಾಥ ಅವರ ಸ್ಮರಣಾರ್ಥ ಶಿವಕುಮಾರ ಅಕ್ಕಿ ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರಭಾವತಿ ಕಲ್ಲನಗೌಡರ ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಡಾ. ರಮೇಶ ಮ. ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.
ಪರಿಸರ ಜಾಗೃತಿ, ಸಾಮಾಜಿಕ ಸೇವೆ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಸಮನ್ವಯದೊಂದಿಗೆ ನಡೆದ ಶಿವಾನುಭವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ವೇದಿಕೆಯಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / lalita MP