ಪ್ರಧಾನಿ ಮೋದಿ ದಾಖಲೆ ಅವಧಿ ಪೂರೈಸಿದ ಸಂಭ್ರಮ
ಗದಗ, 10 ಜೂನ್ (ಹಿ.ಸ.) : ಆ್ಯಂಕರ್ : ದೇಶದ ಪ್ರಧಾನಿಯಾಗಿ ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಗಳ ಸಾಲಿನಲ್ಲಿ ಹೊಸ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಸಂಭ್ರಮಿಸುವ ಅಂಗವಾಗಿ ಗದಗ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಬುಧವಾರ ನಗರದ ಐತಿಹಾಸಿಕ ವ
ಫೋಟೋ


ಗದಗ, 10 ಜೂನ್ (ಹಿ.ಸ.) :

ಆ್ಯಂಕರ್ : ದೇಶದ ಪ್ರಧಾನಿಯಾಗಿ ಅತ್ಯಧಿಕ ಅವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಗಳ ಸಾಲಿನಲ್ಲಿ ಹೊಸ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಸಂಭ್ರಮಿಸುವ ಅಂಗವಾಗಿ ಗದಗ ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ಬುಧವಾರ ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕೇಂದ್ರದಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು 4,399 ದಿನಗಳನ್ನು ಪೂರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈವರೆಗೆ ಅತ್ಯಧಿಕ ಅವಧಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಜವಾಹರಲಾಲ್ ನೆಹರೂ ಅವರ ದಾಖಲೆಯನ್ನು ಹಿಂದಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ವಿಶೇಷ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು, ಸ್ವಾತಂತ್ರ್ಯಾನಂತರ ಭಾರತದ ರಾಜಕೀಯ ಇತಿಹಾಸದಲ್ಲಿ ಇದು ಮಹತ್ವದ ಕ್ಷಣವಾಗಿದೆ ಎಂದು ಹೇಳಿದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಜವಾಹರಲಾಲ್ ನೆಹರೂ ಅವರು 4,398 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು 4,399 ದಿನಗಳನ್ನು ಪೂರೈಸುವ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ಎತ್ತರಗಳನ್ನು ತಲುಪಿದೆ. ಪ್ರತಿದಿನ ಸುಮಾರು 18 ಗಂಟೆಗಳ ಕಾಲ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮೋದಿ ಅವರು ಭಾರತವನ್ನು ವಿಶ್ವದ ಪ್ರಮುಖ ಆರ್ಥಿಕ ಹಾಗೂ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಗೆ ತಂದು ನಿಲ್ಲಿಸಿದ್ದಾರೆ. ದೇಶದ ಗೌರವವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿರುವ ಅವರು ಭಾರತವನ್ನು ವಿಶ್ವಗುರುವನ್ನಾಗಿ ರೂಪಿಸುವ ದಿಸೆಯಲ್ಲಿ ಮಹತ್ತರ ಕಾರ್ಯ ನಿರ್ವಹಿಸಿದ್ದಾರೆ ಎಂದು ಬೊಮ್ಮಾಯಿ ಪ್ರಶಂಸಿಸಿದರು.

ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಕಳೆದ 12 ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಂದು ವರ್ಗದ ಜನರನ್ನು ತಲುಪುವಂತಹ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಪರಿಣಾಮಕಾರಿ ಆಡಳಿತ ನೀಡಲಾಗಿದೆ. ಮಹಿಳೆಯರ ಸಬಲೀಕರಣ, ರೈತರ ಕಲ್ಯಾಣ, ಯುವಜನರ ಉದ್ಯೋಗ ಸೃಷ್ಟಿ, ಕಾರ್ಮಿಕರ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೇಂದ್ರ ಸರ್ಕಾರ ಗಮನಾರ್ಹ ಸಾಧನೆ ಮಾಡಿದೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಅವರು ಸಹ ಮಾತನಾಡಿ, ಪ್ರಧಾನಿ ಮೋದಿ ಅವರ ನಾಯಕತ್ವ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಿದ್ದು, ಅವರ ಆಡಳಿತದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಪ್ರಭಾವಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ವೀರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ಹಾಗೂ ಪ್ರಾರ್ಥನೆಗಳನ್ನು ನೆರವೇರಿಸಲಾಯಿತು. ಪೂಜೆ ಬಳಿಕ ಎಲ್ಲರಿಗೂ ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು. ನಂತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಪೇಟೆ ವೀರಭದ್ರೇಶ್ವರ ದೇವಸ್ಥಾನಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇಶದ ಸುಭಿಕ್ಷತೆ, ಅಭಿವೃದ್ಧಿ ಹಾಗೂ ಪ್ರಧಾನಿ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಂ.ಎಸ್. ಕರೀಗೌಡ್ರ, ಮೋಹನ ಮಾಳಶೆಟ್ಟಿ, ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಜಗನ್ನಾಥಸಾ ಭಾಂಡಗೆ, ತೋಟೊಸಾ ಭಾಂಡಗೆ, ಬಿ.ಎಚ್. ಲದ್ವಾ, ವಿಜಯಕುಮಾರ ಗಡ್ಡಿ, ಸಿದ್ದು ಪಲ್ಲೇದ, ಭಿಮಸಿಂಗ್ ರಾಠೋಡ, ರವಿ ದಂಡಿನ, ಭರತ್ ಬೊಮ್ಮಾಯಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ನಗರಸಭಾ ಸದಸ್ಯರಾದ ವಿನಾಯಕ ಮಾನ್ವಿ, ಅನೀಲ ಅಬ್ಬಿಗೇರಿ, ಚಂದ್ರು ತಡಸದ, ಮಾಧುಸಾ ಮೇರವಾಡೆ, ನಾಗರಾಜ ತಳವಾರ, ಪ್ರಕಾಶ ಅಂಗಡಿ, ಮುತ್ತಣ್ಣ ಮುಶಿಗೇರಿ, ವಿದ್ಯಾವತಿ ಗಡಗಿ, ವಿಜಯಲಕ್ಷ್ಮೀ ದಿಂಡೂರ, ಉಷಾ ದಾಸರ, ಸುರೇಶ ಚಿತ್ತರಗಿ, ಬೂದಪ್ಪ ಹಳ್ಳಿ, ಶಂಕರ ಕಾಕಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ಅಮರನಾಥ ಗಡಗಿ, ಪ್ರಶಾಂತ ನಾಯ್ಕರ, ಶಿವು ಹಿರೇಮನಿಪಾಟೀಲ, ಸಿದ್ರಾಮೇಶ ಹಿರೇಮಠ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande