ಹದಗೆಟ್ಟ ಹಲಗಲಿ–ಕೊಪ್ಪ ಎಸ್.ಕೆ. ರಸ್ತೆ ; ಸಣ್ಣ ತಪ್ಪಾದರೂ ಗಾಯ ಗ್ಯಾರಂಟಿ, ದುರಸ್ತಿಗೆ ಗ್ರಾಮಸ್ಥರ ಆಗ್ರಹ
ಉಂಟಾಗಿದೆ
ರಸ್ತೆ


ಬಾಗಲಕೋಟೆ, 10 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ–ಕೊಪ್ಪ ಎಸ್.ಕೆ. ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ರೈತರು ನಿತ್ಯ ಜೀವದ ಹಂಗು ತೊರೆದು ಪ್ರಯಾಣಿಸುವಂತಾಗಿದೆ. ರಸ್ತೆ ತುಂಬೆಲ್ಲಾ ಗುಂಡಿಗಳು, ಕಿತ್ತುಹೋದ ಡಾಂಬರು ಹಾಗೂ ಅಸಮತಟ್ಟಾದ ಮೇಲ್ಮೈಯಿಂದಾಗಿ ಸ್ವಲ್ಪ ಆಯ ತಪ್ಪಿದರೂ ಅಪಘಾತ ಸಂಭವಿಸಿ ಗಾಯಗೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಹಲಗಲಿ ಗ್ರಾಮದಿಂದ ಕೊಪ್ಪ ಎಸ್.ಕೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮುಧೋಳ ಹಾಗೂ ಬೀಳಗಿ ತಾಲೂಕುಗಳನ್ನು ಜೋಡಿಸುವ ಪ್ರಮುಖ ಮಾರ್ಗವಾಗಿದೆ. ಸುಮಾರು ಐದು ಕಿಲೋಮೀಟರ್ ರಸ್ತೆ ಭಾಗ ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಬರುತ್ತದೆ. ಹಲವು ವರ್ಷಗಳಿಂದ ಸಮರ್ಪಕ ನಿರ್ವಹಣೆ ಕಾಣದ ಪರಿಣಾಮ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಪ್ರಕಾರ, ರಸ್ತೆ ದುರಸ್ತಿಗಾಗಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರೈತರ ಜೀವನಾಡಿಯಾದ ರಸ್ತೆ

ಹಲಗಲಿ ಭಾಗದಿಂದ ಆರಂಭವಾಗುವ ಈ ರಸ್ತೆ ಅರಕೇರಿ, ಚಿಕ್ಕಾಲಗುಂಡಿ, ಕಾತರಕಿ ಸೇರಿದಂತೆ ಹಲವಾರು ಗ್ರಾಮಗಳ ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ರೈತರು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ಈ ಮಾರ್ಗದಲ್ಲಿ ಟ್ರ್ಯಾಕ್ಟರ್ಗಳು, ಬೈಕ್ಗಳು, ಎತ್ತಿನ ಗಾಡಿಗಳು ಸೇರಿದಂತೆ ವಿವಿಧ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಆದರೆ ರಸ್ತೆಯ ದುಸ್ಥಿತಿಯಿಂದ ವಾಹನ ಚಾಲಕರು ಹಾಗೂ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಗುಂಡಿಗಳು ನೀರಿನಿಂದ ತುಂಬಿ ಅಪಘಾತದ ಅಪಾಯ ಮತ್ತಷ್ಟು ಹೆಚ್ಚುತ್ತಿದೆ.

ಪುನರ್ವಸತಿ ಕೇಂದ್ರದಿಂದ ಹೆಚ್ಚಿದ ವಾಹನ ದಟ್ಟಣೆ

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಕೊಪ್ಪ ಎಸ್.ಕೆ. ಗ್ರಾಮ ಮುಳುಗಡೆ ಪ್ರದೇಶವಾಗಿರುವುದರಿಂದ ಗ್ರಾಮದ ಜನರಿಗೆ ಇದೇ ರಸ್ತೆಯ ಪಕ್ಕದಲ್ಲಿ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದೆ. ಪರಿಣಾಮವಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಮೇಲಿನ ಒತ್ತಡವೂ ಹೆಚ್ಚಾಗಿದೆ.

ಎರಡೂ ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತರು ಹಾಗೂ ವ್ಯಾಪಾರಸ್ಥರು ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಕಳೆದ ವರ್ಷ ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ತೇಪೆ ಹಾಕಲಾಗಿದ್ದರೂ, ಅವು ಈಗಾಗಲೇ ಕಿತ್ತು ಹೋಗಿವೆ. ಹೀಗಾಗಿ ಸಂಪೂರ್ಣ ರಸ್ತೆ ಮರುನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಪ್ರತಿಕ್ರಿಯೆ

ಈ ಕುರಿತು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಸಿ.ಎಚ್. ಮಾಚನೂರ ಪ್ರತಿಕ್ರಿಯಿಸಿ, ಹಲಗಲಿ–ಕೊಪ್ಪ ಎಸ್.ಕೆ. ರಸ್ತೆ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರಕಿದ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ರಸ್ತೆ ದುರಸ್ತಿ ಕಾರ್ಯ ಯಾವಾಗ ಆರಂಭವಾಗಲಿದೆ ಎಂಬುದನ್ನು ಕಾದು ನೋಡಬೇಕಿದ್ದು, ಸಾರ್ವಜನಿಕರು ಮಾತ್ರ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ರಸ್ತೆ ದುರಸ್ತಿಯಲ್ಲಿ ಮತ್ತಷ್ಟು ವಿಳಂಬವಾದರೆ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande