


ಬಳ್ಳಾರಿ, 10 ಜೂನ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಂದ ಹಣ ಪಡೆದು ಪಾಸು ಮಾಡಲಾಗುತ್ತಿದೆ ಎಂದು ಆರೋಪಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಬಳ್ಳಾರಿ ಘಟಕವು ಆರೋಪಿಸಿ, ವಿಶ್ವವಿದ್ಯಾಲಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿದೆ.
ಈ ಹಗರಣದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಹಾಗೂ ಇನ್ನಿತರರು ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡುವ ಸಮಯದಲ್ಲಿ ಪಿ.ಜಿ. ಅಥವಾ ಡಿಗ್ರಿ ವಿದ್ಯಾರ್ಥಿಗಳ ಕೋಡಿಂಗ್-ಡಿಕೋಡಿಂಗ್ ಅಂಕಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಅವ್ಯವಹಾರವು ತುಂಬಾ ದಿನಗಳಿಂದ ನಡೆಯುತ್ತಿದೆ. ಈಗ ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡಲಾಗಿದೆ. ವೆಂಕಟೇಶ ವನದುರ್ಗ, ರಿಯಾಜ್ ಇವರು ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಹಣ ಪಡೆದು ಉತ್ತೀರ್ಣಗೊಳಿಸಿದ್ದಾರೆ. ಈ ಕೃತ್ಯದಿಂದಾಗಿ ಕೆಲ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹೀಗೆ ಹಣದಿಂದ ಪದವಿಯನ್ನು ಪಡೆದುಕೊಳ್ಳುವುದಾದರೆ ದಿನವಿಡೀ ಕಾಲೇಜುಗಳಿಗೆ ಬಂದು ಪಾಠ ಕೇಳಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಅಧಿಕಾರಿಗಳು ಪರೀಕ್ಷಾ ಕಾರ್ಯಗಳಿಗೆ ಇವರುಗಳನ್ನೇ ಪ್ರತೀಬಾರಿ ನೇಮಿಸುತ್ತಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರನ್ನು ತಕ್ಷಣವೇ ಅಮಾನತು ಮಾಡಿ, ತನಿಖೆಗೆ ಒಳಪಡಿಸಬೆಕು ಎಂದು ಅವರು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಭರತ್, ಬಳ್ಳಾರಿ ಜಿಲ್ಲಾ ಸಂಚಾಲಕರು ಕೆ.ದಿಲೀಪ್, ವಿಜಯನಗರ ಜಿಲ್ಲಾ ಸಂಚಾಲಕರು ಧನುಷ್ ಕುಮಾರ್, ಕೊಪ್ಪಳ ಜಿಲ್ಲಾ ಸಂಚಾಲಕರು ಹಮ್ಮಿಗೇಶ ಹಾಗೂ ದರ್ಶನ್, ಮಾರುತಿ, ಶ್ರೀಕಾಂತ್, ಕೃಷ್ಣ, ಶರತ್, ಇ.ಟಿ. ವಿನಾಯಕ್, ಕಿರಣ್ ಮುಂಡರಗಿ, ಅನುಶ್ರೀ, ಮಹೇಶ, ಸುರೇಶ, ರಘು ಸಂತೋಷ, ಸಪ್ತಗಿರಿ, ಕಾರ್ತಿಕ ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್