
ನವದೆಹಲಿ, 09 ಮೇ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರವು ನಿವೃತ್ತ ಲೆಫ್ಟಿನೆಂಟ್ ಜನರಲ್ ಎನ್. ಎಸ್. ರಾಜಾ ಸುಬ್ರಮಣಿಯನ್ ಅವರನ್ನು ದೇಶದ ಮುಂದಿನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ ನೇಮಿಸಿದೆ ಎಂದು ವರದಿಯಾಗಿದೆ. ಅವರು ಇದೇ ವೇಳೆ ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಕೂಡ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ಸಿ.ಡಿ.ಎಸ್. ಆಗಿರುವ ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿ ಮೇ 30 ರಂದು ಅಂತ್ಯಗೊಳ್ಳಲಿದೆ. ಅವರ ನಂತರ ಈ ಮಹತ್ವದ ಹುದ್ದೆಯನ್ನು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎನ್. ಎಸ್. ರಾಜಾ ಸುಬ್ರಮಣಿಯನ್ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸೇನಾ ಸೇವೆಯ ಹಿನ್ನೆಲೆ
ಲೆಫ್ಟಿನೆಂಟ್ ಜನರಲ್ ಎನ್. ಎಸ್. ರಾಜಾ ಸುಬ್ರಮಣಿಯನ್ ಅವರು ದೀರ್ಘಕಾಲದ ಸೈನಿಕ ಸೇವೆಯ ಅನುಭವ ಹೊಂದಿದ್ದಾರೆ. ಅವರು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದಕ್ಕೂ ಮೊದಲು ಅವರು 2024 ಜುಲೈ 1 ರಿಂದ 2025 ಜುಲೈ 31 ರವರೆಗೆ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2023 ಮಾರ್ಚ್ ರಿಂದ 2024 ಜೂನ್ ವರೆಗೆ ಸೆಂಟ್ರಲ್ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿದ್ದರು. ಸುಮಾರು 39 ವರ್ಷಗಳ ಸುದೀರ್ಘ ಸೇವೆಯ ನಂತರ 2025 ಜುಲೈ 31 ರಂದು ಸೇನೆಯಿಂದ ನಿವೃತ್ತರಾಗಿದ್ದರು
ಸಿ.ಡಿ.ಎಸ್. ಹುದ್ದೆಯ ಹಿನ್ನೆಲೆ:
ಮೂರು ಸೇನೆಗಳ (ಭೂಸೇನೆ, ನೌಕಾಸೇನೆ, ವಾಯುಸೇನೆ) ನಡುವೆ ಉತ್ತಮ ಸಮನ್ವಯ ಸಾಧಿಸಲು ಕೇಂದ್ರ ಸರ್ಕಾರವು 1 ಜನವರಿ 2020 ರಂದು ಸಿ.ಡಿ.ಎಸ್. ಹುದ್ದೆಯನ್ನು ರಚಿಸಿತ್ತು. ಜನರಲ್ ಬಿಪಿನ್ ರಾವತ್ ಅವರು ಭಾರತದ ಮೊದಲ ಸಿ.ಡಿ.ಎಸ್. ಆಗಿದ್ದರು.
ನಂತರ ಜನರಲ್ ಅನಿಲ್ ಚೌಹಾಣ್ ಅವರನ್ನು 2022 ಸೆಪ್ಟೆಂಬರ್ 30 ರಂದು ಎರಡನೇ ಸಿ.ಡಿ.ಎಸ್. ಆಗಿ ನೇಮಿಸಲಾಗಿತ್ತು. ಅವರ ಅಧಿಕಾರಾವಧಿ ನಂತರ ಈಗ ಹೊಸ ನೇಮಕಾತಿ ನಡೆದಿದೆ.
ಪ್ರಮುಖ ಜವಾಬ್ದಾರಿ
ಹೊಸ ಸಿ.ಡಿ.ಎಸ್. ಆಗಿ ಅವರು ಮೂರು ಸೇನೆಗಳ ಸಮನ್ವಯ, ರಕ್ಷಣಾ ಯೋಜನೆಗಳ ಏಕೀಕರಣ ಹಾಗೂ ತಂತ್ರಾತ್ಮಕ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa