
ಚಿತ್ರದುರ್ಗ, 09 ಮೇ (ಹಿ.ಸ.) :
ಆ್ಯಂಕರ್ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಹಾಗೂ ಸಾರ್ವಜನಿಕ ಜೀವನವನ್ನು ಸ್ಮರಿಸುವ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮವು ಶನಿವಾರ ಚಿತ್ರದುರ್ಗದಲ್ಲಿ ಐತಿಹಾಸಿಕವಾಗಿ ನೆರವೇರಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಡಿಯೂರಪ್ಪ ಅವರನ್ನು “ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಿದ ಮಹಾನಾಯಕ” ಎಂದು ಬಣ್ಣಿಸಿದರು.
ಭಾರಿ ಜನಸ್ತೋಮದ ನಡುವೆ ಮಾತನಾಡಿದ ಅಮಿತ್ ಶಾ, “ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವ ಬಲಪಡಿಸಲು ಯಡಿಯೂರಪ್ಪ ಅವರು ಜೀವನವನ್ನೇ ಸಮರ್ಪಿಸಿದ್ದಾರೆ. ಶೂನ್ಯದಿಂದ ಪಕ್ಷವನ್ನು ಕಟ್ಟಿಕೊಂಡು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಸ್ಥಾಪನೆಗೆ ಕಾರಣರಾದವರು ಯಡಿಯೂರಪ್ಪ” ಎಂದು ಕೊಂಡಾಡಿದರು.
“ರೈತರ ಹಿತಾಸಕ್ತಿ, ಬಡವರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯಡಿಯೂರಪ್ಪ ನಿರಂತರ ಹೋರಾಟ ನಡೆಸಿದ್ದಾರೆ. ಅವರ ರಾಜಕೀಯ ಜೀವನ ಇಂದಿನ ಯುವ ರಾಜಕಾರಣಿಗಳಿಗೆ ಆದರ್ಶ” ಎಂದು ಹೇಳಿದರು.
ಯಡಿಯೂರಪ್ಪ ಅವರ ಐದು ದಶಕಗಳ ರಾಜಕೀಯ ಪಯಣ, ವಿಧಾನಸಭೆಯ ಭಾಷಣಗಳು ಹಾಗೂ ಸಾರ್ವಜನಿಕ ಬದುಕಿನ ಕುರಿತ ಸ್ಮರಣಿಕಾ ಕೃತಿಗಳನ್ನು ಇದೇ ಸಂದರ್ಭದಲ್ಲಿ ಅಮಿತ್ ಶಾ ಬಿಡುಗಡೆ ಮಾಡಿದರು. ಸಭಾಂಗಣದಲ್ಲಿ ಕಾರ್ಯಕರ್ತರು ಘೋಷಣೆ ಕೂಗಿ ನಾಯಕರಿಗೆ ಭಾರೀ ಸ್ವಾಗತ ಕೋರಿದರು.
ಅಭಿಮಾನೋತ್ಸವಕ್ಕಾಗಿ ಚಿತ್ರದುರ್ಗ ಹೊರವಲಯದಲ್ಲಿ ಭಾರಿ ವೇದಿಕೆ ನಿರ್ಮಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಗಮಿಸಿದ್ದರು. ಕಾರ್ಯಕ್ರಮ ಸ್ಥಳದಲ್ಲಿ ಕುಡಿಯುವ ನೀರು, ಊಟ, ವೈದ್ಯಕೀಯ ನೆರವು ಹಾಗೂ ನೆರಳು ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, “ಜನರ ಆಶೀರ್ವಾದವೇ ನನ್ನ ಶಕ್ತಿ. ಕಾರ್ಯಕರ್ತರ ಪ್ರೀತಿ ಮತ್ತು ನಂಬಿಕೆಯಿಂದಲೇ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಶಯ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವರಾದ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು ಸಹ ಉಪಸ್ಥಿತರಿದ್ದು ಯಡಿಯೂರಪ್ಪ ಅವರಿಗೆ ಆಶೀರ್ವಾದ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa