
ನವದೆಹಲಿ, 09 ಮೇ (ಹಿ.ಸ.) :
ಆ್ಯಂಕರ್ : ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಸರಕು ಸಾಗಿಸುತ್ತಿದ್ದ ಮರದ ದೋಣಿಗೆ ಬೆಂಕಿ ತಗುಲಿ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬ ಭಾರತೀಯ ನಾವಿಕ ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ಮಾಹಿತಿ ನೀಡಿವೆ.
ಗುರುವಾರ ಈ ಘಟನೆ ನಡೆದಿದ್ದು, ಸುಮಾರು 18 ಭಾರತೀಯ ಸಿಬ್ಬಂದಿ ದೋಣಿಯಲ್ಲಿ ಇದ್ದರು. ಸರಕು ಸಾಗಣೆ ಕಾರ್ಯದಲ್ಲಿದ್ದ ದೋಣಿಯಲ್ಲಿ ಹಠಾತ್ ಬೆಂಕಿ ಹೊತ್ತಿಕೊಂಡ ಪರಿಣಾಮ ಅದು ನಂತರ ಮುಳುಗಿದೆ ಎಂದು ತಿಳಿದುಬಂದಿದೆ. ಬೆಂಕಿ ಹೇಗೆ ತಗುಲಿತು ಎಂಬ ನಿಖರ ಕಾರಣವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ.
ಅಪಘಾತದ ನಂತರ ಹಾದುಹೋಗುತ್ತಿದ್ದ ಮತ್ತೊಂದು ಹಡಗಿನ ಸಹಾಯದಿಂದ ದೋಣಿಯಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಯಿತು. ರಕ್ಷಣಾ ಕಾರ್ಯಾಚರಣೆಯ ವೇಳೆ ಒಬ್ಬ ಭಾರತೀಯ ನಾವಿಕ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದುಬೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆ ನಂತರ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ. ಜೊತೆಗೆ ದೋಣಿ ಮಾಲೀಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪೀಡಿತ ಭಾರತೀಯರಿಗೆ ಅಗತ್ಯವಾದ ಎಲ್ಲಾ ನೆರವನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಪ್ರದೇಶವು ಅಂತಾರಾಷ್ಟ್ರೀಯ ಸಾಗಣೆ ಮಾರ್ಗಗಳಲ್ಲಿ ಅತ್ಯಂತ ಪ್ರಮುಖವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa