ಸೋಮನಾಥ ಮತ್ತು ಭಾರತದ ಅಜೇಯ ಆತ್ಮಶಕ್ತಿ : ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, 08 ಮೇ (ಹಿ.ಸ.) : ಆ್ಯಂಕರ್ : ಸೋಮನಾಥ ದೇವಾಲಯವು ಕೇವಲ ಒಂದು ಆರಾಧನಾ ಕೇಂದ್ರವಲ್ಲ, ಅದು ಭಾರತದ ನಾಗರಿಕತೆ, ಆತ್ಮಗೌರವ ಮತ್ತು ಅಜೇಯ ಸಂಕಲ್ಪದ ಪ್ರತೀಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮನಾಥ ದೇವಾಲಯದ ಪುನರ್ನಿರ್ಮಾಣದ 75ನೇ ವರ್ಷದ ಅಂಗವಾಗಿ ಅವರು ಬರೆದ ಲೇಖನದಲ್ಲ
ಪ್ರಧಾನಿ ಹಂಚಿಕೊಂಡಿರುವ ಚಿತ್ರಗಳು


ನವದೆಹಲಿ, 08 ಮೇ (ಹಿ.ಸ.) :

ಆ್ಯಂಕರ್ : ಸೋಮನಾಥ ದೇವಾಲಯವು ಕೇವಲ ಒಂದು ಆರಾಧನಾ ಕೇಂದ್ರವಲ್ಲ, ಅದು ಭಾರತದ ನಾಗರಿಕತೆ, ಆತ್ಮಗೌರವ ಮತ್ತು ಅಜೇಯ ಸಂಕಲ್ಪದ ಪ್ರತೀಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮನಾಥ ದೇವಾಲಯದ ಪುನರ್ನಿರ್ಮಾಣದ 75ನೇ ವರ್ಷದ ಅಂಗವಾಗಿ ಅವರು ಬರೆದ ಲೇಖನದಲ್ಲಿ ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕ ಪರಂಪರೆಯ ಮಹತ್ವವನ್ನು ವಿವರಿಸಿದ್ದಾರೆ.

2026ರ ಆರಂಭದಲ್ಲಿ ನಡೆದ “ಸೋಮನಾಥ ಸ್ವಾಭಿಮಾನ ಪರ್ವ”ದಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಪ್ರಧಾನಿ, ಸೋಮನಾಥ ದೇವಾಲಯದ ಮೇಲಿನ ಮೊದಲ ದಾಳಿಗೆ ಸಾವಿರ ವರ್ಷ ಪೂರ್ಣಗೊಂಡಿದ್ದರೂ ದೇವಾಲಯದ ಶಾಶ್ವತತೆಯು ಇನ್ನೂ ಅಚಲವಾಗಿದೆ ಎಂದು ಹೇಳಿದ್ದಾರೆ. ಇದೇ ಮೇ 11ರಂದು ಪುನರ್ನಿರ್ಮಿತ ದೇವಾಲಯದ ಉದ್ಘಾಟನೆಯ 75ನೇ ವರ್ಷದ ಆಚರಣೆಯಲ್ಲಿ ಮತ್ತೊಮ್ಮೆ ಭಾಗವಹಿಸುವ ಅವಕಾಶ ಸಿಕ್ಕಿರುವುದನ್ನು ಅವರು ಗೌರವದ ಕ್ಷಣವೆಂದು ಬಣ್ಣಿಸಿದ್ದಾರೆ.

ಸೋಮನಾಥ ದೇವಾಲಯದ ಎದುರು ಅಲೆಮಾಡುವ ಸಮುದ್ರ ಮಾನವ ಧೈರ್ಯ ಮತ್ತು ಆತ್ಮಬಲದ ಸಂಕೇತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಎಷ್ಟೇ ಪ್ರಬಲ ಬಿರುಗಾಳಿಗಳು ಬಂದರೂ ಮಾನವ ಚೇತನವನ್ನು ಶಾಶ್ವತವಾಗಿ ಕುಗ್ಗಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸೋಮನಾಥ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಪುರಾತನ ಶಾಸ್ತ್ರಗಳಲ್ಲಿ ಪ್ರಭಾಸ ಕ್ಷೇತ್ರದ ಮಹಿಮೆ ಉಲ್ಲೇಖಿತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಅನೇಕ ಸಾಮ್ರಾಜ್ಯಗಳು ಉದಯಿಸಿ ಅಸ್ತಂಗತವಾದರೂ ಸೋಮನಾಥ ಜನರ ಹೃದಯದಲ್ಲಿ ಸದಾ ಜೀವಂತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇವಾಲಯದ ರಕ್ಷಣೆಗೆ ಮತ್ತು ಪುನರುತ್ಥಾನಕ್ಕೆ ಶ್ರಮಿಸಿದ ಅನೇಕ ಮಹನೀಯರನ್ನು ಪ್ರಧಾನಿ ಸ್ಮರಿಸಿದ್ದಾರೆ. ಲಕುಲೀಶ, ಸೋಮಶರ್ಮ, ಧಾರಸೇನ, ಭೀಮ ಪ್ರಥಮ, ಜಯಪಾಲ, ಆನಂದಪಾಲ, ರಾಜಾ ಭೋಜ, ಕರ್ಣದೇವ ಸೊಳಂಕಿ, ಜಯಸಿಂಹ ಸಿದ್ಧರಾಜ, ಕುಮಾರಪಾಲ, ಅಹಲ್ಯಾಬಾಯಿ ಹೋಳ್ಕರ್ ಸೇರಿದಂತೆ ಅನೇಕ ರಾಜರು, ಧರ್ಮಗುರುಗಳು ಮತ್ತು ವೀರರು ಸೋಮನಾಥದ ಉಳಿವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.

1947ರ ನವೆಂಬರ್ 13ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಸೋಮನಾಥದ ಅವಶೇಷಗಳ ಮುಂದೆ ನಿಂತು ದೇವಾಲಯವನ್ನು ಪುನರ್ನಿರ್ಮಿಸುವ ಸಂಕಲ್ಪ ಮಾಡಿದ ಕ್ಷಣವನ್ನು ಪ್ರಧಾನಿ ವಿಶೇಷವಾಗಿ ಸ್ಮರಿಸಿದ್ದಾರೆ. ಆ ಸಂಕಲ್ಪವು ಕೇವಲ ಗುಜರಾತಿನಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಹೊಸ ಚೈತನ್ಯ ಮೂಡಿಸಿತು ಎಂದು ಅವರು ಹೇಳಿದ್ದಾರೆ.

ಸರ್ದಾರ್ ಪಟೇಲ್ ತಮ್ಮ ಕನಸಿನ ಸಾಕಾರವನ್ನು ನೋಡುವ ಮೊದಲು ಅಗಲಿದರೂ, ಅವರ ದೃಷ್ಟಿಯನ್ನು ಕೆ.ಎಂ. ಮುನ್ಷಿ ಮುಂದುವರಿಸಿದರು ಎಂದು ಪ್ರಧಾನಿ ಹೇಳಿದ್ದಾರೆ. 1951ರಲ್ಲಿ ದೇವಾಲಯದ ಪುನರ್ನಿರ್ಮಾಣ ಪೂರ್ಣಗೊಂಡ ಬಳಿಕ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ದೇವಾಲಯವನ್ನು ಉದ್ಘಾಟಿಸಿದ್ದನ್ನು ಅವರು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ್ದಾರೆ.

2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸೋಮನಾಥ ಪುನರ್ನಿರ್ಮಾಣದ 50ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಪ್ರಧಾನಿ ನೆನಪಿಸಿಕೊಂಡಿದ್ದಾರೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಅಡ್ವಾಣಿ ಉಪಸ್ಥಿತಿಯಿಂದ ಕಾರ್ಯಕ್ರಮ ಇನ್ನಷ್ಟು ವಿಶೇಷಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.

ಡಾ. ರಾಜೇಂದ್ರ ಪ್ರಸಾದ್ ತಮ್ಮ ಭಾಷಣದಲ್ಲಿ ಸೋಮನಾಥವು ಅಚಲವಾದ ಭಕ್ತಿ ಮತ್ತು ನಂಬಿಕೆಯ ಪ್ರತೀಕ ಎಂದು ಹೇಳಿದ್ದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಜನರ ಜೀವನದಲ್ಲಿ ಸಮೃದ್ಧಿಯೂ ಬರಬೇಕು ಎಂಬ ಸರ್ದಾರ್ ಪಟೇಲ್ ಅವರ ಆಶಯವನ್ನು ಸಾಕಾರಗೊಳಿಸುವ ದಾರಿಯಲ್ಲಿ ದೇಶ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.

“ಅಭಿವೃದ್ಧಿಯೂ ಬೇಕು, ಪರಂಪರೆಯೂ ಬೇಕು” ಎಂಬ ಧ್ಯೇಯದೊಂದಿಗೆ ಸೋಮನಾಥದಿಂದ ಕಾಶಿ, ಕಾಮಾಖ್ಯೆಯಿಂದ ಕೆದಾರನಾಥ, ಅಯೋಧ್ಯೆಯಿಂದ ಉಜ್ಜಯಿನಿವರೆಗೆ ದೇಶದ ಆಧ್ಯಾತ್ಮಿಕ ಕೇಂದ್ರಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಇದರಿಂದ ಸ್ಥಳೀಯ ಆರ್ಥಿಕತೆ ಬಲಗೊಂಡಿದ್ದು, ರಾಷ್ಟ್ರೀಯ ಏಕತೆಗೂ ಉತ್ತೇಜನ ಸಿಕ್ಕಿದೆ ಎಂದು ಹೇಳಿದ್ದಾರೆ.

ಸೋಮನಾಥದ ರಕ್ಷಣೆಗಾಗಿ ಬಲಿದಾನ ನೀಡಿದ ವೀರರನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಭಾರತದ ವಿವಿಧ ಭಾಗಗಳ ಜನರು ದೇವಾಲಯದ ವೈಭವವನ್ನು ಮರುಸ್ಥಾಪಿಸಲು ನೀಡಿದ ಕೊಡುಗೆ ರಾಷ್ಟ್ರೀಯ ಏಕತೆಯ ಮಹತ್ವದ ಉದಾಹರಣೆ ಎಂದು ಅವರು ತಿಳಿಸಿದ್ದಾರೆ.

ಆಸ್ಥೆ, ಸಂಸ್ಕೃತಿ ಮತ್ತು ಏಕತೆಯೊಂದಿಗೆ ನಿಂತಿರುವ ಸಮಾಜವನ್ನು ದೀರ್ಘಕಾಲ ಕುಗ್ಗಿಸಲು ಸಾಧ್ಯವಿಲ್ಲ ಎಂಬುದನ್ನು ಸೋಮನಾಥ ನೆನಪಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಇದೇ ಏಕಾತ್ಮ ಭಾವನೆ ರಾಷ್ಟ್ರಹಿತಕ್ಕಾಗಿ ಎಲ್ಲರನ್ನು ಒಂದಾಗಿ ನಡೆಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ಪವಿತ್ರ ಸಂದರ್ಭದಲ್ಲಿ ದೇಶದ ಜನರು ಸೋಮನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಅದರ ಭವ್ಯತೆಯನ್ನು ಅನುಭವಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಸೋಮನಾಥದ ತೀರದಲ್ಲಿ ನಿಂತಾಗ ಭಾರತದ ಅಜೇಯ ಆತ್ಮಶಕ್ತಿ ಮತ್ತು ಸಾವಿರಾರು ವರ್ಷಗಳ ನಾಗರಿಕತೆಯ ಸ್ಪಂದನವನ್ನು ಅನುಭವಿಸಬಹುದು ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande