
ಬೆಂಗಳೂರು, 08 ಮೇ (ಹಿ.ಸ.) :
ಆ್ಯಂಕರ್ : ನಾಳೆ ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ಥಕ ರಾಜಕಾರಣದ ಸುವರ್ಣ “ಅಭಿಮಾನೋತ್ಸವ” ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಆಗಮಿಸುತ್ತಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಣೆ ಹಂಚಿಕೊಂಡಿರುವ ಅವರು, “ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ಥಕ ರಾಜಕಾರಣದ ಸುವರ್ಣ ಅಭಿಮಾನೋತ್ಸವಕ್ಕೆ ಆಗಮಿಸುತ್ತಿರುವ ನೆಚ್ಚಿನ ಹಿರಿಯ ನಾಯಕರು ಹಾಗೂ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಹೃತ್ಪೂರ್ವಕ ಸ್ವಾಗತ” ಎಂದು ತಿಳಿಸಿದ್ದಾರೆ.
“ತಮ್ಮ ನಿರಂತರ ಕಾರ್ಯಕ್ರಮಗಳ ನಡುವೆಯೂ, ಯಡಿಯೂರಪ್ಪ ಅವರ ಮೇಲಿರುವ ಗೌರವಾಭಿಮಾನ ಹಾಗೂ ರಾಜ್ಯದ ಕಾರ್ಯಕರ್ತರ ಮೇಲಿರುವ ಪ್ರೀತಿಯಿಂದ, ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯವರ ಪ್ರಮಾಣ ಸ್ವೀಕಾರ ಸಮಾರಂಭದಿಂದ ನೇರವಾಗಿ ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಅವರಿಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ” ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರ ದೀರ್ಘ ಸಾರ್ವಜನಿಕ ಜೀವನ, ರೈತಪರ ಹೋರಾಟಗಳು ಹಾಗೂ ರಾಜ್ಯ ರಾಜಕಾರಣದಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಅಭಿಮಾನೋತ್ಸವವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa