
ಬೆಂಗಳೂರು, 08 ಮೇ (ಹಿ.ಸ.) :
ಆ್ಯಂಕರ್ : ಬಹುಕಾಲದಿಂದ ನಿರೀಕ್ಷೆಯಾಗಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆಗೆ ಕೊನೆಗೂ ಚಾಲನೆ ದೊರೆತಿದ್ದು, ಜೂನ್ 14ರಿಂದ 24ರೊಳಗೆ ಚುನಾವಣಾ ದಿನಾಂಕ ಘೋಷಿಸುವಂತೆ ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಸಿದ್ಧತೆಗಳ ಕುರಿತು ಇಂದು ಮಹತ್ವದ ಸಭೆ ನಡೆಯಿತು.
ಸಭೆಗೆ ಜಿಬಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗೈರಾಗಿದ್ದ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯುಕ್ತ ಜಿ.ಎ. ಸಂಗ್ರೇಶಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಚುನಾವಣಾ ಆಯುಕ್ತ ಜಿ.ಎ. ಸಂಗ್ರೇಶಿ, “ಜೂನ್ 14ರಿಂದ 24ರೊಳಗೆ ಚುನಾವಣಾ ದಿನಾಂಕ ಘೋಷಿಸುವಂತೆ ಸೂಚಿಸಲಾಗಿದೆ. ಕಾನೂನು ಪ್ರಕಾರ ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸಬೇಕು. ಅದಕ್ಕಾಗಿ ಈ ಸಭೆ ಕರೆಯಲಾಗಿತ್ತು” ಎಂದು ಹೇಳಿದರು.
ಚುನಾವಣೆ ನಡೆಸಲು ಅಗತ್ಯವಿರುವ ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿದ್ದು, ದಿನಾಂಕ ನಿಗದಿ ಮಾತ್ರ ಬಾಕಿಯಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಜನಗಣತಿ, ಮನೆಮನೆ ಸಮೀಕ್ಷೆ ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳ ಹಿನ್ನೆಲೆ ಸೂಕ್ತ ಸಮಯವನ್ನು ಪರಿಗಣಿಸಿ ದಿನಾಂಕ ನಿಗದಿಪಡಿಸುವಂತೆ ಜಿಬಿಎಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
“ಜೂನ್ 30ರೊಳಗೆ ಚುನಾವಣಾ ದಿನಾಂಕ ನಿಗದಿಪಡಿಸಬೇಕು ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಈ ಕುರಿತು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಬೇಕಿದೆ” ಎಂದು ಸಂಗ್ರೇಶಿ ಹೇಳಿದರು.
ಅದೇ ವೇಳೆ, “ಚುನಾವಣೆ ಮುಂದೂಡುವ ಅಧಿಕಾರ ನಮಗಿಲ್ಲ. ನಾವು ಕೇವಲ ಜೂನ್ 14ರಿಂದ 24ರೊಳಗೆ ದಿನಾಂಕ ನಿಗದಿಪಡಿಸುವಂತೆ ಸೂಚಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, ವಾರ್ಡ್ ವಿಂಗಡಣೆ, ಮತದಾರರ ಪಟ್ಟಿ ಹಾಗೂ ಮೀಸಲಾತಿ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
ಚುನಾವಣಾ ಕಾರ್ಯಕ್ಕೆ ಅಗತ್ಯವಾದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳು ಇದ್ದಲ್ಲಿ ಅವುಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಹೇಶ್ವರ್ ರಾವ್ ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa