
ನವದೆಹಲಿ, 07 ಮೇ (ಹಿ.ಸ.):
ಆ್ಯಂಕರ್:
ದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಏರೋಸ್ಪೇಸ್ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಾನ್ಪುರದಲ್ಲಿ ಏರೋನಾಟಿಕ್ಸ್ ಮತ್ತು ಸಂಬಂಧಿತ ವಲಯಗಳಿಗಾಗಿ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ಉನ್ನತ ಮಟ್ಟದ ಕೈಗಾರಿಕಾ ಸಮಾಲೋಚನಾ ಸಭೆ ನಡೆಸಲಿದೆ.
ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಧೀನದಲ್ಲಿರುವ ತರಬೇತಿ ಮಹಾನಿರ್ದೇಶನಾಲಯ (ಡಿಜಿಟಿ) ಈ ಸಭೆಯನ್ನು ಆಯೋಜಿಸುತ್ತಿದೆ. ಕಾನ್ಪುರದ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ (ಎನ್‌ಎಸ್‌ಟಿಐ) ಆವರಣದಲ್ಲಿ ಸ್ಥಾಪಿಸಲಿರುವ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದ ರೂಪುರೇಷೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸಭೆಯಲ್ಲಿ ಕೈಗಾರಿಕಾ ಕ್ಷೇತ್ರದ 30ಕ್ಕೂ ಹೆಚ್ಚು ಹಿರಿಯ ನಾಯಕರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನೀತಿ ತಜ್ಞರು ಭಾಗವಹಿಸಲಿದ್ದಾರೆ. ಪ್ರಧಾನ ಮಂತ್ರಿ ಕೌಶಲ್ಯ ಮತ್ತು ಉದ್ಯೋಗ ಪರಿವರ್ತನಾ ಯೋಜನೆ ಅಡಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಐದು ವಲಯ-ನಿರ್ದಿಷ್ಟ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಕಾನ್ಪುರದ ಜೊತೆಗೆ ಭುವನೇಶ್ವರ, ಚೆನ್ನೈ, ಹೈದರಾಬಾದ್ ಮತ್ತು ಲೂಧಿಯಾನ ನಗರಗಳಲ್ಲಿಯೂ ಇಂತಹ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಕಾನ್ಪುರದ ಕೇಂದ್ರಕ್ಕೆ ವಿಶೇಷ ಮಹತ್ವ ದೊರೆತಿದ್ದು, ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವಿನ ದ್ವಿಪಕ್ಷೀಯ ಒಪ್ಪಂದದಡಿ ಇದನ್ನು ರೂಪಿಸಲಾಗುತ್ತಿದೆ. ಫ್ರಾನ್ಸ್‌ನ ಏರೋನಾಟಿಕ್ಸ್ ಪರಿಣತಿ ಹಾಗೂ ಭಾರತದ ವೇಗವಾಗಿ ಬೆಳೆಯುತ್ತಿರುವ ಕೌಶಲ್ಯ ವ್ಯವಸ್ಥೆಯನ್ನು ಸಂಯೋಜಿಸುವ ಉದ್ದೇಶ ಈ ಯೋಜನೆಯಾಗಿದೆ.
ಈ ಕೇಂದ್ರದಲ್ಲಿ ವಿಮಾನ ವಿನ್ಯಾಸ, ಏರೋಸ್ಪೇಸ್ ಉತ್ಪಾದನೆ, ನಿರ್ವಹಣೆ-ದುರಸ್ತಿ-ಕೂಲಂಕುಷ ಪರೀಕ್ಷೆ, ಏವಿಯಾನಿಕ್ಸ್ ಮತ್ತು ಸಂಬಂಧಿತ ತಂತ್ರಜ್ಞಾನ ಕ್ಷೇತ್ರಗಳಿಗೆ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.
ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಡಿಜಿಟಿ ಮಹಾನಿರ್ದೇಶಕ ದಿಲೀಪ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ. ಸಭೆಯ ಸಂದರ್ಭದಲ್ಲಿ ಎನ್‌ಎಸ್‌ಟಿಐ ಕಾನ್ಪುರದ ಅಸ್ತಿತ್ವದಲ್ಲಿರುವ ಮೂಲಸೌಕರ್ಯ, ಕಾರ್ಯಾಗಾರ ಸೌಲಭ್ಯಗಳು ಮತ್ತು ತರಬೇತಿ ವ್ಯವಸ್ಥೆಗಳ ನೇರ ಪ್ರದರ್ಶನವೂ ನಡೆಯಲಿದೆ.
ಸಭೆಯಲ್ಲಿ ಪ್ರಮುಖ ಕೈಗಾರಿಕಾ ಪಾಲುದಾರರ ಪಾತ್ರ, ಸಹ-ಹೂಡಿಕೆ ಮಾದರಿಗಳು, ಪಠ್ಯಕ್ರಮದ ಸಹ-ಅಭಿವೃದ್ಧಿ, ಬೋಧಕರ ತರಬೇತಿ ವ್ಯವಸ್ಥೆ ಹಾಗೂ ತರಬೇತಿದಾರರಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಾನ್ಯತೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa