
ಅಹಮದಾಬಾದ್, 31 ಮೇ (ಹಿ.ಸ.) :
ಆ್ಯಂಕರ್ : ಕಳೆದ ಎರಡು ತಿಂಗಳುಗಳಿಂದ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಮನರಂಜನೆ ನೀಡಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ಟೂರ್ನಿಯು ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಇಂದು ಸಂಜೆ ನಡೆಯಲಿರುವ ಫೈನಲ್ ಪಂದ್ಯಕ್ಕೆ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ.
ಇಂದು ಸಂಜೆ 7.30ಕ್ಕೆ ನಡೆಯಲಿರುವ ಪ್ರಶಸ್ತಿ ಸಮರದಲ್ಲಿ ಹಾಲಿ ಚಾಂಪಿಯನ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಆತಿಥೇಯ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಫೈನಲ್ ಪಂದ್ಯವು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಕ್ವಾಲಿಫೈಯರ್-1ರಲ್ಲಿ ಆರ್ಸಿಬಿ ವಿರುದ್ಧ ಸೋಲು ಕಂಡಿದ್ದ ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ತವರಿನ ಮೈದಾನದಲ್ಲಿ ಆಡುತ್ತಿರುವುದರಿಂದ ತಂಡಕ್ಕೆ ಹೆಚ್ಚುವರಿ ಆತ್ಮವಿಶ್ವಾಸ ಲಭಿಸಿದೆ. ಇದೇ ಮೈದಾನದಲ್ಲಿ ಲೀಗ್ ಹಂತದಲ್ಲಿ ಆರ್ಸಿಬಿ ವಿರುದ್ಧ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿದ್ದ ನೆನಪು ಗುಜರಾತ್ ಪಡೆಗೆ ಬಲ ತುಂಬಿದೆ.
ಇನ್ನೊಂದೆಡೆ ಕಳೆದ ಎರಡು ಋತುಗಳಿಂದ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆರ್ಸಿಬಿ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಉಭಯ ತಂಡಗಳು ಇದುವರೆಗೆ ಒಟ್ಟು ಒಂಬತ್ತು ಬಾರಿ ಮುಖಾಮುಖಿಯಾಗಿದ್ದು, ಐದು ಪಂದ್ಯಗಳಲ್ಲಿ ಆರ್ಸಿಬಿ ಹಾಗೂ ನಾಲ್ಕು ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಜಯಗಳಿಸಿವೆ.
ಆರ್ಸಿಬಿ ತಂಡವು ಈ ಬಾರಿ ಸಮತೋಲನಯುತ ತಂಡವಾಗಿ ಹೊರಹೊಮ್ಮಿದೆ. ಆರಂಭಿಕ ಆಟಗಾರರ ಸಮಸ್ಯೆ ಕೆಲಕಾಲ ಕಾಡಿದ್ದರೂ, ವೆಂಕಟೇಶ್ ಅಯ್ಯರ್ ಉತ್ತಮ ಪ್ರದರ್ಶನದ ಮೂಲಕ ತಂಡದ ಆತಂಕವನ್ನು ಕಡಿಮೆ ಮಾಡಿದ್ದಾರೆ. ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಟಿಮ್ ಡೇವಿಡ್ ಹಾಗೂ ಕೃನಾಲ್ ಪಾಂಡ್ಯ ಅವರಂತಹ ಬ್ಯಾಟರ್ಗಳು ಪಂದ್ಯದ ಚಿತ್ರಣವನ್ನು ಕ್ಷಣಾರ್ಧದಲ್ಲಿ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್ ಹಾಗೂ ರಸಿಕ್ ಸಲಾಂ ಉತ್ತಮ ಲಯದಲ್ಲಿದ್ದು, ಎದುರಾಳಿಗಳಿಗೆ ಸವಾಲು ಒಡ್ಡುವ ನಿರೀಕ್ಷೆಯಿದೆ.
ಗುಜರಾತ್ ಟೈಟಾನ್ಸ್ ಪರ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಕ್ವಾಲಿಫೈಯರ್-2 ಪಂದ್ಯದಲ್ಲಿ ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ತಂಡವನ್ನು ಫೈನಲ್ಗೆ ಕೊಂಡೊಯ್ದಿತ್ತು. ಜೊತೆಗೆ ಜೋಸ್ ಬಟ್ಲರ್ ಕೂಡ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಮೂವರ ವಿಕೆಟ್ಗಳನ್ನು ಆರಂಭದಲ್ಲೇ ಕಬಳಿಸುವುದು ಆರ್ಸಿಬಿ ಗೆಲುವಿನ ಪ್ರಮುಖ ಕೀಲಿಕೈ ಎನ್ನಬಹುದು.
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟರ್ಗಳಿಗೆ ಅನುಕೂಲಕರವಾಗಿದೆ. ಕೆಂಪು ಮಣ್ಣಿನ ಟ್ರ್ಯಾಕ್ ಉತ್ತಮ ವೇಗ ಮತ್ತು ಬೌನ್ಸ್ ಒದಗಿಸುವುದರಿಂದ ಬ್ಯಾಟರ್ಗಳು ತಮ್ಮ ಶಾಟ್ಗಳನ್ನು ಆತ್ಮವಿಶ್ವಾಸದಿಂದ ಆಡಲು ಅವಕಾಶ ಸಿಗುತ್ತದೆ. ಆದರೆ ಮೈದಾನದ ಗಾತ್ರ ದೊಡ್ಡದಿರುವುದರಿಂದ ಪ್ರತಿಯೊಂದು ಹೊಡೆತವೂ ಬೌಂಡರಿ ಅಥವಾ ಸಿಕ್ಸರ್ ಆಗುವುದಿಲ್ಲ.
ಈ ಋತುವಿನಲ್ಲಿ ಇಲ್ಲಿ ಮೊದಲ ಇನ್ನಿಂಗ್ಸ್ನ ಸರಾಸರಿ ಮೊತ್ತ 193 ರನ್ ಆಗಿದ್ದರೆ, ಒಟ್ಟಾರೆ ಸರಾಸರಿ ಸ್ಕೋರ್ 208 ರನ್ ಆಗಿದೆ.
ಇದುವರೆಗೂ ನಡೆದ 13 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಎಂಟು ಬಾರಿ ಹಾಗೂ ಗುರಿ ಬೆನ್ನಟ್ಟಿದ ತಂಡಗಳು ಐದು ಬಾರಿ ಗೆಲುವು ಸಾಧಿಸಿವೆ. ಇಬ್ಬನಿಯ ಪ್ರಭಾವ ಕಡಿಮೆ ಇರಬಹುದಾದ ಕಾರಣ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.