ಮ್ಯಾನ್ಮಾರ್ ಅಧ್ಯಕ್ಷರ ಭಾರತ ಭೇಟಿ ; ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ
ನವದೆಹಲಿ, 30 ಮೇ (ಹಿ.ಸ.) : ಆ್ಯಂಕರ್ : ಮ್ಯಾನ್ಮಾರ್ ಅಧ್ಯಕ್ಷ ಯು ಮಿನ್ ಆಂಗ್ ಹ್ಲೈಂಗ್ ಅವರು ಐದು ದಿನಗಳ ಅಧಿಕೃತ ಭಾರತ ಪ್ರವಾಸಕ್ಕಾಗಿ ಶನಿವಾರ ಬಿಹಾರದ ಬೋಧಗಯಾಗೆ ಆಗಮಿಸುತ್ತಿದ್ದು, ಜೂನ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನವದೆಹಲಿಯಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ
MYAMMAR-PRESIDENT


ನವದೆಹಲಿ, 30 ಮೇ (ಹಿ.ಸ.) :

ಆ್ಯಂಕರ್ : ಮ್ಯಾನ್ಮಾರ್ ಅಧ್ಯಕ್ಷ ಯು ಮಿನ್ ಆಂಗ್ ಹ್ಲೈಂಗ್ ಅವರು ಐದು ದಿನಗಳ ಅಧಿಕೃತ ಭಾರತ ಪ್ರವಾಸಕ್ಕಾಗಿ ಶನಿವಾರ ಬಿಹಾರದ ಬೋಧಗಯಾಗೆ ಆಗಮಿಸುತ್ತಿದ್ದು, ಜೂನ್ 1ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನವದೆಹಲಿಯಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಮ್ಯಾನ್ಮಾರ್ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳ ಬಲವರ್ಧನೆ ಕುರಿತಂತೆ ಉಭಯ ನಾಯಕರು ಚರ್ಚೆ ನಡೆಸುವ ನಿರೀಕ್ಷೆಯಿದೆ.

ಮೇ 30ರಿಂದ ಜೂನ್ 3ರವರೆಗೆ ನಡೆಯಲಿರುವ ಈ ಭೇಟಿಯು ಮ್ಯಾನ್ಮಾರ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯು ಮಿನ್ ಆಂಗ್ ಹ್ಲೈಂಗ್ ಅವರ ಮೊದಲ ವಿದೇಶಿ ಪ್ರವಾಸವಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ ಈ ಭೇಟಿ ಮಹತ್ವದ್ದಾಗಿದೆ.

ಅಧ್ಯಕ್ಷರು ಶನಿವಾರ ಬೆಳಿಗ್ಗೆ ಬಿಹಾರದ ಗಾಯಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಬಿಗಿ ಭದ್ರತೆಯಲ್ಲಿ ಬೋಧಗಯಾಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವಿಶ್ವ ಪ್ರಸಿದ್ಧ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಬರ್ಮೀಸ್ ವಿಹಾರ, ಮಹಾಬೋಧಿ ಧಮ್ಮ ಏಕತಾ ಮಠ, ಸುಜಾತಾ ದೇವಸ್ಥಾನ ಸೇರಿದಂತೆ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಹಲವು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

ಮೂಲತಃ ಮ್ಯಾನ್ಮಾರ್ ಅಧ್ಯಕ್ಷರು ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ ಆಫ್ರಿಕಾ ಖಂಡದ ಕೆಲವು ರಾಷ್ಟ್ರಗಳಲ್ಲಿ ಎಬೋಲಾ ವೈರಸ್ ಸೋಂಕು ಹರಡಿದ ಹಿನ್ನೆಲೆಯಲ್ಲಿ ನಾಲ್ಕನೇ ಭಾರತ–ಆಫ್ರಿಕಾ ವೇದಿಕೆ ಶೃಂಗಸಭೆಯನ್ನು ಮುಂದೂಡಲಾಗಿದ್ದು, ಅದರೊಂದಿಗೆ ಆಯೋಜಿಸಲಾಗಿದ್ದ ಬಿಗ್ ಕ್ಯಾಟ್ ಅಲಯನ್ಸ್ ಸಮಾವೇಶವೂ ಮುಂದೂಡಿಕೆಯಾಗಿದೆ. ಆದಾಗ್ಯೂ, ಅಧ್ಯಕ್ಷರ ಭಾರತ ಭೇಟಿ ಪೂರ್ವನಿಗದಿಯಂತೆ ಮುಂದುವರಿದಿದೆ.

ಜೂನ್ 1ರಂದು ನವದೆಹಲಿಯಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಗಡಿ ಭದ್ರತೆ, ವ್ಯಾಪಾರ, ಹೂಡಿಕೆ, ಸಂಪರ್ಕ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬೌದ್ಧ ಧಾರ್ಮಿಕ ಪ್ರವಾಸೋದ್ಯಮ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ಭಾರತ ಮತ್ತು ಮ್ಯಾನ್ಮಾರ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿಯೂ ಚರ್ಚೆಗಳು ನಡೆಯಲಿವೆ.

ನವದೆಹಲಿಯ ಕಾರ್ಯಕ್ರಮಗಳ ಬಳಿಕ ಅಧ್ಯಕ್ಷರು ಮುಂಬೈಗೆ ಭೇಟಿ ನೀಡಲಿದ್ದು, ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಪ್ರಮುಖ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಭಾರತದ ಕೈಗಾರಿಕಾ ಅಭಿವೃದ್ಧಿ ಹಾಗೂ ಹೂಡಿಕೆ ಅವಕಾಶಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.

ಮ್ಯಾನ್ಮಾರ್ನ 11ನೇ ಅಧ್ಯಕ್ಷರಾಗಿರುವ ಯು ಮಿನ್ ಆಂಗ್ ಹ್ಲೈಂಗ್ ಅವರು ಈ ಹಿಂದೆ ದೇಶದ ಸೇನಾ ಮುಖ್ಯಸ್ಥರಾಗಿದ್ದರು. 2021ರಲ್ಲಿ ನಡೆದ ಸೇನಾ ದಂಗೆಯ ಮೂಲಕ ಚುನಾಯಿತ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ದೇಶದ ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಗಳ ನಡುವೆ ಅವರು 2026ರ ಏಪ್ರಿಲ್ನಲ್ಲಿ ಅಧಿಕೃತವಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

ಭಾರತದ ‘ನೆರೆಹೊರೆಯ ಮೊದಲ ಆದ್ಯತೆ’ ಹಾಗೂ ‘ಪೂರ್ವಾಭಿಮುಖ ನೀತಿ’ಯಲ್ಲಿ ಮ್ಯಾನ್ಮಾರ್ ಪ್ರಮುಖ ಸ್ಥಾನ ಹೊಂದಿರುವ ಹಿನ್ನೆಲೆಯಲ್ಲಿ ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧಗಳಿಗೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande