ಏಷ್ಯನ್ ಪ್ಯಾರಾ ಥೋಬಾಲ್ ಚಾಂಪಿಯನ್ಶಿಪ್ಗೆ ಗದಗ ಜಿಲ್ಲೆಯ ಕ್ರೀಡಾಪಟುಗಳ ಆಯ್ಕೆ
ಗದಗ, 30 ಮೇ (ಹಿ.ಸ.) : ಆ್ಯಂಕರ್ : ಮಲೇಷ್ಯಾದಲ್ಲಿ ಜೂನ್ 2ರಿಂದ 5ರವರೆಗೆ ನಡೆಯಲಿರುವ 2ನೇ ಏಷ್ಯನ್ ಪ್ಯಾರಾ ಥೋಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಗದಗ ಜಿಲ್ಲೆಯ ಪ್ಯಾರಾ ಕ್ರೀಡಾಪಟುಗಳು ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾ ವಲಯದಲ್ಲಿ ಸಂತಸ ಮೂಡಿಸಿದೆ. ಗದಗ ಜಿಲ್ಲೆಯ ಪ್ರ
ಫೋಟೋ


ಗದಗ, 30 ಮೇ (ಹಿ.ಸ.) :

ಆ್ಯಂಕರ್ : ಮಲೇಷ್ಯಾದಲ್ಲಿ ಜೂನ್ 2ರಿಂದ 5ರವರೆಗೆ ನಡೆಯಲಿರುವ 2ನೇ ಏಷ್ಯನ್ ಪ್ಯಾರಾ ಥೋಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಗದಗ ಜಿಲ್ಲೆಯ ಪ್ಯಾರಾ ಕ್ರೀಡಾಪಟುಗಳು ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾ ವಲಯದಲ್ಲಿ ಸಂತಸ ಮೂಡಿಸಿದೆ.

ಗದಗ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳು ಹಾಗೂ ತರಬೇತುದಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಗದಗ ಜಿಲ್ಲೆಯ ಹೆಮ್ಮೆಯ ಪ್ಯಾರಾ ಕ್ರೀಡಾಪಟುವಾದ ಮಾಲತಿ ಇನಾಮತಿ ಅವರು ಈ ಬಾರಿಯೂ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ನಿರಂತರ ಸಾಧನೆ, ಶ್ರಮ ಮತ್ತು ನಾಯಕತ್ವದ ಗುಣಗಳಿಂದ ಗುರುತಿಸಿಕೊಂಡಿರುವ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕಳೆದ ಬಾರಿ ನಡೆದ ದಕ್ಷಿಣ ಏಷ್ಯನ್ ಪ್ಯಾರಾ ಥೋಬಾಲ್ ಚಾಂಪಿಯನ್ಶಿಪ್ನಲ್ಲಿ ಮಾಲತಿ ಇನಾಮತಿ ಅವರ ನಾಯಕತ್ವದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿತ್ತು. ಅವರ ಸಮರ್ಥ ನಾಯಕತ್ವ, ತಂಡದ ಒಗ್ಗಟ್ಟು ಹಾಗೂ ಆಟದ ನೈಪುಣ್ಯ ದೇಶದ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಮತ್ತೊಮ್ಮೆ ಭಾರತ ತಂಡದ ನಾಯಕತ್ವದ ಹೊಣೆ ಹೊತ್ತಿರುವ ಅವರು, ಏಷ್ಯನ್ ಮಟ್ಟದ ಚಾಂಪಿಯನ್ಶಿಪ್ನಲ್ಲಿಯೂ ದೇಶಕ್ಕೆ ಪದಕ ತಂದುಕೊಡುವ ವಿಶ್ವಾಸ ಮೂಡಿಸಿದ್ದಾರೆ.

ಇದೇ ವೇಳೆ ಗದಗ ಜಿಲ್ಲೆಯ ಬಿಂಕದಕಟ್ಟಿ ಗ್ರಾಮದ ಪ್ರತಿಭಾವಂತ ಪ್ಯಾರಾ ಥೋಬಾಲ್ ಕ್ರೀಡಾಪಟುವಾದ ದೇವಮ್ಮಾ ಗರೇಬಾಳ ಅವರು ಕೂಡ ಅಂತರರಾಷ್ಟ್ರೀಯ ಮಟ್ಟದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಗ್ರಾಮೀಣ ಭಾಗದಿಂದ ಬಂದಿರುವ ದೇವಮ್ಮಾ ಅವರು ತಮ್ಮ ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ನಿರಂತರ ಅಭ್ಯಾಸದ ಮೂಲಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಪಡೆದುಕೊಂಡಿರುವುದು ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕವಾಗಿದೆ.

ಅದೇ ರೀತಿ, ಗದಗದ ರಿಯಾಜ್ ಬಾನಿ ಅವರು ಭಾರತೀಯ ತಂಡದ ಸಹಾಯಕ ಕೋಚ್ ಆಗಿ ಮಲೇಷ್ಯಾಕ್ಕೆ ತೆರಳಲಿದ್ದಾರೆ. ಕ್ರೀಡಾಪಟುಗಳಿಗೆ ಸಮರ್ಪಕ ತರಬೇತಿ ನೀಡಿ ಅವರನ್ನು ಉನ್ನತ ಮಟ್ಟದ ಸ್ಪರ್ಧೆಗಳಿಗೆ ಸಿದ್ಧಗೊಳಿಸುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದು, ಇದೀಗ ರಾಷ್ಟ್ರೀಯ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಸ್ಥಾನ ಪಡೆದಿರುವುದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಮತ್ತೊಂದು ಗೌರವವಾಗಿದೆ.

ಗದಗ ಜಿಲ್ಲೆಯ ಕ್ರೀಡಾಪಟುಗಳು ಮತ್ತು ತರಬೇತುದಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗಿ ಪರಿಗಣಿಸಲಾಗಿದೆ. ವಿಶೇಷವಾಗಿ ಪ್ಯಾರಾ ಕ್ರೀಡಾಪಟುಗಳು ಸವಾಲುಗಳನ್ನು ಮೀರಿ ಸಾಧನೆಯ ಶಿಖರ ತಲುಪುತ್ತಿರುವುದು ಸಮಾಜಕ್ಕೆ ಪ್ರೇರಣೆಯಾಗಿದೆ.

ಜಿಲ್ಲೆಯ ಕ್ರೀಡಾಭಿಮಾನಿಗಳು, ಸಾರ್ವಜನಿಕರು, ವಿವಿಧ ಸಂಘ–ಸಂಸ್ಥೆಗಳ ಮುಖಂಡರು ಹಾಗೂ ಕ್ರೀಡಾ ಕ್ಷೇತ್ರದ ಗಣ್ಯರು ಆಯ್ಕೆಯಾದ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಅಭಿನಂದನೆ ಸಲ್ಲಿಸಿದ್ದು, ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡಿ ದೇಶಕ್ಕೆ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂದು ಶುಭ ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande