
ನವದೆಹಲಿ, 24 ಮೇ (ಹಿ.ಸ.) :
ಆ್ಯಂಕರ್ : ಇಬೋಲಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ಮಹತ್ವದ ಆರೋಗ್ಯ ಸಲಹೆ ನೀಡಿದೆ. ಮುಂದಿನ ಆದೇಶ ಬರುವವರೆಗೆ ಕಾಂಗೋ, ಉಗಾಂಡಾ ಮತ್ತು ದಕ್ಷಿಣ ಸೂಡಾನ್ ದೇಶಗಳಿಗೆ ಅನಗತ್ಯ ಪ್ರಯಾಣ ಕೈಗೊಳ್ಳಬಾರದು ಎಂದು ಸೂಚಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳನ್ನು ಅನುಸರಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಪರಾಮರ್ಶೆ ಹೊರಡಿಸಿದೆ. ಕಾಂಗೋ, ಉಗಾಂಡಾ ಹಾಗೂ ಅದರ ಗಡಿಭಾಗಗಳಿಗೆ ಹೊಂದಿಕೊಂಡಿರುವ ದಕ್ಷಿಣ ಸೂಡಾನ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ಹರಡುವ ಅಪಾಯ ಅತ್ಯಧಿಕವಾಗಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಸ್ತುತ ಈ ದೇಶಗಳಲ್ಲಿ ವಾಸಿಸುತ್ತಿರುವ ಅಥವಾ ಪ್ರವಾಸದಲ್ಲಿರುವ ಭಾರತೀಯರು ಸ್ಥಳೀಯ ಆಡಳಿತ ಹೊರಡಿಸಿರುವ ಆರೋಗ್ಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿಯು ಮೇ 22ರಂದು ಪ್ರವೇಶ ಕೇಂದ್ರಗಳಲ್ಲಿ ರೋಗ ನಿಗಾವ್ಯವಸ್ಥೆಯನ್ನು ಬಲಪಡಿಸುವ ಕುರಿತು ತಾತ್ಕಾಲಿಕ ಶಿಫಾರಸುಗಳನ್ನು ಹೊರಡಿಸಿತ್ತು. ಜೊತೆಗೆ ಬುಂಡಿಬುಗ್ಯೋ ವೈರಸ್ ಪತ್ತೆಯಾದ ಪ್ರದೇಶಗಳಿಗೆ ಪ್ರಯಾಣಿಸದಂತೆ ಸಹ ಸೂಚನೆ ನೀಡಲಾಗಿದೆ.
ಭಾರತದಲ್ಲಿ ಇದುವರೆಗೆ ಬುಂಡಿಬುಗ್ಯೋ ತಳಿಯ ಇಬೋಲಾ ಸೋಂಕಿನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಇಬೋಲಾ ಒಂದು ಗಂಭೀರ ವೈರಲ್ ರಕ್ತಸ್ರಾವ ಜ್ವರವಾಗಿದ್ದು, ಇಬೋಲಾ ವೈರಸ್ನ ‘ಬುಂಡಿಬುಗ್ಯೋ’ ತಳಿಯಿಂದ ಉಂಟಾಗುತ್ತದೆ. ಈ ರೋಗದಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗಿದೆ.
ಪ್ರಸ್ತುತ ಬುಂಡಿಬುಗ್ಯೋ ತಳಿಯ ಇಬೋಲಾ ಸೋಂಕಿಗೆ ತಡೆಗಟ್ಟುವ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆಗಾಗಿ ಯಾವುದೇ ಅಧಿಕೃತ ಅನುಮೋದನೆ ಲಭ್ಯವಿಲ್ಲ ಎಂದು ತಿಳಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಮೇ 17ರಂದು ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿ–2005ರಡಿ ಈ ಸ್ಥಿತಿಯನ್ನು ‘ಅಂತರರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿತ್ತು. ಇದೇ ವೇಳೆ ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವೂ ಕಾಂಗೋ ಮತ್ತು ಉಗಾಂಡಾದಲ್ಲಿ ಹರಡುತ್ತಿರುವ ಇಬೋಲಾ ಸೋಂಕಿನ ಸ್ಥಿತಿಯನ್ನು ‘ಖಂಡ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.