
ನವದೆಹಲಿ, 23 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ 19ನೇ ರೋಜ್ಗಾರ್ ಮೇಳದಲ್ಲಿ ದೇಶದ ವಿವಿಧ ಭಾಗಗಳ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ದೇಶದ ಯುವಕರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂದಿನ ದಿನ ದೇಶದ ಸಾವಿರಾರು ಯುವಕರು ಮತ್ತು ಅವರ ಕುಟುಂಬಗಳಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ನೇಮಕಾತಿಗಳು ಯುವಕರ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದು, ದೇಶದ ಅಭಿವೃದ್ಧಿ ಪಯಣದಲ್ಲಿ ಜವಾಬ್ದಾರಿಯುತ ಪಾಲುದಾರರನ್ನಾಗಿ ರೂಪಿಸಲಿವೆ ಎಂದು ತಿಳಿಸಿದರು.
ರೈಲ್ವೆ, ಬ್ಯಾಂಕಿಂಗ್, ರಕ್ಷಣಾ ಇಲಾಖೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೇಮಕಗೊಂಡಿರುವ ಯುವಕರು ದೇಶ ಸೇವೆಯ ಮಹತ್ವದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲಿದ್ದಾರೆ ಎಂದು ಪ್ರಧಾನಿ ಹೇಳಿದರು.
ಜಗತ್ತಿನ ಗಮನ ಭಾರತದ ಯುವಕರತ್ತ
ಇತ್ತೀಚೆಗೆ ನಡೆಸಿದ ಐದು ರಾಷ್ಟ್ರಗಳ ಪ್ರವಾಸದ ವೇಳೆ ವಿಶ್ವದ ಪ್ರಮುಖ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾಗಿ ಪ್ರಧಾನಿ ತಿಳಿಸಿದರು. “ಎಲ್ಲೆಡೆ ಭಾರತದ ಯುವಜನತೆ ಹಾಗೂ ದೇಶದ ತಾಂತ್ರಿಕ ಪ್ರಗತಿಯ ಬಗ್ಗೆ ಅಪಾರ ಉತ್ಸಾಹ ಮತ್ತು ವಿಶ್ವಾಸ ವ್ಯಕ್ತವಾಗುತ್ತಿದೆ. ಜಗತ್ತು ಭಾರತದ ಅಭಿವೃದ್ಧಿ ಪಯಣದ ಭಾಗವಾಗಲು ಬಯಸುತ್ತಿದೆ” ಎಂದು ಹೇಳಿದರು.
ವಿವಿಧ ದೇಶಗಳೊಂದಿಗೆ ಭಾರತ ಸಹಭಾಗಿತ್ವವನ್ನು ವಿಸ್ತರಿಸುತ್ತಿರುವುದರಿಂದ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅವರು ಹೇಳಿದರು.
ಹಸಿರು ತಂತ್ರಜ್ಞಾನದಲ್ಲಿ ಭಾರಿ ಅವಕಾಶ
ಶುದ್ಧ ಇಂಧನ, ಹಸಿರು ಜಲಜನಕ, ನಿರ್ಣಾಯಕ ಖನಿಜಗಳು ಹಾಗೂ ಸುಸ್ಥಿರ ಉತ್ಪಾದನಾ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಸ್ವೀಡನ್, ನಾರ್ವೆ ಹಾಗೂ ಇಟಲಿ ದೇಶಗಳೊಂದಿಗೆ ಹಸಿರು ಪರಿವರ್ತನೆ ಮತ್ತು ಸುಸ್ಥಿರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಸಹಕಾರ ವಿಸ್ತರಿಸುತ್ತಿದೆ ಎಂದರು.
ಯುಎಇ ಮತ್ತು ನಾರ್ವೆಯೊಂದಿಗಿನ ಸಹಭಾಗಿತ್ವದಿಂದ ಭಾರತದ ಹಡಗು ನಿರ್ಮಾಣ ಪರಿಸರ ವ್ಯವಸ್ಥೆ ಮತ್ತಷ್ಟು ಬಲಪಡಲಿದ್ದು, ಇದರಿಂದ ಎಂಜಿನಿಯರ್ಗಳು, ತಂತ್ರಜ್ಞರು ಹಾಗೂ ನುರಿತ ಕಾರ್ಮಿಕರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ದೊಡ್ಡ ಹೆಜ್ಜೆ
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿಯೊಂದಿಗೆ ದೇಶ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಗುರಿ ಸಾಧನೆಗಾಗಿ ವಿವಿಧ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಹೂಡಿಕೆಗಳು ನಡೆಯುತ್ತಿವೆ ಎಂದರು.
ಭಾರತವು ವೇಗವಾಗಿ ಜಾಗತಿಕ ವಿದ್ಯುನ್ಮಾನ ಉತ್ಪಾದನಾ ಕೇಂದ್ರವಾಗಿ ರೂಪುಗೊಳ್ಳುತ್ತಿದ್ದು, ದೇಶದಲ್ಲಿ ಅರೆವಾಹಕ (ಸೆಮಿಕಂಡಕ್ಟರ್) ಉತ್ಪಾದನಾ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
“ಮುಂಬರುವ ವರ್ಷಗಳಲ್ಲಿ ಭಾರತದ 10 ಪ್ರಮುಖ ಸೆಮಿಕಂಡಕ್ಟರ್ ಘಟಕಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿವೆ. ಇದರಲ್ಲಿ ಯುವಕರ ಪಾತ್ರ ಅತ್ಯಂತ ದೊಡ್ಡದು” ಎಂದು ಪ್ರಧಾನಿ ಹೇಳಿದರು.
ಗ್ರಾಮೀಣ ಸಂಪರ್ಕದಿಂದ ಹೊಸ ಅವಕಾಶ
ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಸಂಪರ್ಕ ವ್ಯವಸ್ಥೆಯಿಂದ ರೈತರು, ಸಣ್ಣ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ದೊರಕುತ್ತಿವೆ ಎಂದು ಪ್ರಧಾನಿ ಹೇಳಿದರು.
ನಾರಿ ಶಕ್ತಿಯ ಭಾಗವಹಿಸುವಿಕೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ಮಹಿಳಾ ನೇತೃತ್ವದ ನವೋದ್ಯಮಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು. ಮುದ್ರಾ ಯೋಜನೆಯಡಿ ಕೋಟ್ಯಂತರ ಮಹಿಳೆಯರು ಆರ್ಥಿಕ ನೆರವು ಪಡೆದಿರುವುದಾಗಿ ಹೇಳಿದರು.
“ಸಾರ್ವಜನಿಕ ಸೇವೆಯನ್ನು ರಾಷ್ಟ್ರ ಸೇವೆಯಾಗಿ ಪರಿಗಣಿಸಿ”
ಸರ್ಕಾರಿ ಸೇವೆಗೆ ಸೇರ್ಪಡೆಯಾಗುತ್ತಿರುವ ಯುವಕರಿಗೆ ಕರೆ ನೀಡಿದ ಪ್ರಧಾನಿ, ಸಾರ್ವಜನಿಕ ಸೇವೆಯನ್ನು ಕೇವಲ ಉದ್ಯೋಗವಾಗಿ ನೋಡದೆ, ರಾಷ್ಟ್ರ ಹಾಗೂ ಜನರಿಗೆ ಸೇವೆ ಸಲ್ಲಿಸುವ ಅವಕಾಶವಾಗಿ ಪರಿಗಣಿಸಬೇಕು ಎಂದು ಹೇಳಿದರು.
18 ರೋಜ್ಗಾರ್ ಮೇಳಗಳಲ್ಲಿ 12 ಲಕ್ಷ ನೇಮಕಾತಿ ಪತ್ರ
ದೇಶದಾದ್ಯಂತ ಇದುವರೆಗೆ ನಡೆದ 18 ರೋಜ್ಗಾರ್ ಮೇಳಗಳ ಮೂಲಕ ಸುಮಾರು 12 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
19ನೇ ರೋಜ್ಗಾರ್ ಮೇಳ ದೇಶದ 47 ಸ್ಥಳಗಳಲ್ಲಿ ಏಕಕಾಲದಲ್ಲಿ ನಡೆಯಿತು. ಆಯ್ಕೆಯಾದ ಅಭ್ಯರ್ಥಿಗಳನ್ನು ರೈಲ್ವೆ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿಗೆ ನೇಮಕ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.